ರಾಷ್ಟ್ರೀಯ

ಶಬರಿಮಲೆಯತ್ತ ಸಾಗುತ್ತಿದ್ದ ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಕೆಪಿ ಶಶಿಕಲಾ; ಹಿಂದೂಪರ ಸಂಘಟನೆಗಳಿಂದ ಕೇರಳ ಬಂದ್’ಗೆ ಕರೆ

Pinterest LinkedIn Tumblr

ತಿರುವನಂತಪುರಂ: ಇರುಮುಡಿ ಹೊತ್ತು ಶಬರಿಮಲೆಯತ್ತ ಸಾಗುತ್ತಿದ್ದ ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಕೆಪಿ ಶಶಿಕಲಾ ಅವರನ್ನು ಕೇರಳ ಪೊಲೀಸರು ಬಂಧಿಸಿರುವುದನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಇಂದು ಕೇರಳ ಬಂದ್ ಗೆ ಕರೆ ನೀಡಿವೆ.

ಹಿಂದೂ ಐಕ್ಯವೇದಿಯ ರಾಜ್ಯಾಧ್ಯಕ್ಷರಾದ ಕೆಪಿ ಶಶಿಕಲಾ ಅವರನ್ನು ಬಂಧಿಸಿರುವ ಕೇರಳ ಪೊಲೀಸರ ನಡೆಯನ್ನು ಖಂಡಿಸಿ ಶಬರಿಮಲೆ ಕ್ರಿಯಾ ಸಮಿತಿ ಇಂದು ಕೇರಳದಾದ್ಯಂತ ಬಂದ್ ಗೆ ಕರೆ ನೀಡಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆಯವರೆಗೂ ತಮ್ಮ ಪ್ರತಿಭಟನೆಗೆ ಬೆಂಬಲ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಬಂದ್ ಹಿನ್ನೆಲೆಯಲ್ಲಿ ಕೇರಳದಲ್ಲಿ ಬಸ್ ಸಂಚಾರ ಸಂಪೂರ್ಣ ಮೊಟಕುಗೊಂಡಿದ್ದು, ಕೆ ಎಸ್ ಆರ್ ಟಿ ಸಿ ಸೇರಿದಂತೆ ಯಾವುದೇ ಬಸ್ಸುಗಳು ರಸ್ತೆಗಿಳಿದಿಲ್ಲ.

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿನ್ನಲೆಯಲ್ಲಿ ಸನ್ನಿಧಾನಂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪೊಲೀಸರು ನಿಷೇಧಾಜ್ಞೆ ವಿಧಿಸಿದ್ದರು. ಇದನ್ನು ಉಲ್ಲಂಘಿಸಿ ಸನ್ನಿಧಾನಂಗೆ ಆಗಮಿಸಿದ ಹಿನ್ನಲೆಯಲ್ಲಿ ಶಶಿಕಲಾ ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮುಂಜಾನೆ ಎರಡು ಗಂಟೆ ಸುಮಾರಿನಲ್ಲಿ ಮರಕ್ಕೊಟ್ಟಂ ತಲುಪಿದ್ದ ಶಶಿಕಲಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಇರುಮುಡಿ ಹೊತ್ತಿದ್ದ ಭಕ್ತೆಯನ್ನು ಪೊಲೀಸರು ಬಂಧಿಸಿದ್ದಾರೆ: ವಿಎಚ್ ಪಿ
ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಎಚ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಸ್‌ ಜೆ ಆರ್‌ ಕುಮಾರ್‌ ಅವರು, ‘ಇಂದು ಶನಿವಾರ ನಸುಕಿನ 2.30ರ ವೇಳೆಗೆ ಶಬರಿಮಲೆ ಸಮೀಪದ ಮರಕ್ಕೂಟಂ ಎಂಬಲ್ಲಿ ಪೊಲೀಸರು ಹಿಂದೂ ಐಕ್ಯವೇದಿ ರಾಜ್ಯ ಘಟಕದ ಅಧ್ಯಕ್ಷೆಯಾಗಿರುವ ಕೆ ಪಿ ಶಶಿಕಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶಶಿಕಲಾ ಅವರು ಇರುಮುಡಿಕಟ್ಟನ್ನು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಒಯ್ಯುತ್ತಿದ್ದ ವೇಳೆ ಪೊಲೀಸರು ಅವರನ್ನು ಬಂಧಿಸಿದರು. ಅವರ ಜತೆಗೆ ಇನ್ನೂ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೇರಳ ಸರಕಾರ ಶಬರಿಮಲೆ ದೇವಸ್ಥಾನವನ್ನು ನಾಶ ಮಾಡಲು ಯತ್ನಿಸುತ್ತಿದ್ದು, ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ ಇಂದು ಬೆಳಗ್ಗಿನಿಂದ ಸಂಜೆಯ ತನಕ ನಡೆಯುವ ಮುಷ್ಕರದಿಂದ ಆವಶ್ಯಕ ಸೇವೆಗಳ ಮತ್ತು ಅಯ್ಯಪ್ಪ ಭಕ್ತರ ವಾಹನಗಳ ಸಂಚಾರಕ್ಕೆ ಯಾವುದೇ ಬಾಧೆ ಇರುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ

ಪೊಲೀಸ್ ಠಾಣೆಯಲ್ಲೇ ಕೆಪಿ ಶಶಿಕಲಾ ಉಪವಾಸ ಸತ್ಯಾಗ್ರಹ, ಠಾಣೆಗೆ ಕಾರ್ಯಕರ್ತರಿಂದ ಘೆರಾವ್

ಇತ್ತ ಪೊಲೀಸರಿಂದ ಬಂಧನಕ್ಕೀಡಾಗಿರುವ ಹಿಂದೂ ಐಕ್ಯವೇದಿಯ ರಾಜ್ಯಾಧ್ಯಕ್ಷರಾದ ಕೆಪಿ ಶಶಿಕಲಾ ಅವರು ಪೊಲೀಸ್ ಠಾಣೆಯಲ್ಲೇ ಸತ್ಯಾಗ್ರಹ ನಡೆಸುತ್ತಿದ್ದು, ಠಾಣೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಶಶಿಕಲಾ ಅವರನ್ನು ಇರಿಸಲಾಗಿರುವ ರನ್ನಿ ಪೊಲೀಸ್ ಠಾಣೆಗೆ ಹಿಂದೂ ಪರ ಕಾರ್ಯಕರ್ತರು ಘೆರಾವ್ ಹಾಕಿದ್ದು, ಸುಮಾರು 2000 ಕಾರ್ಯಕರ್ತ ದಂಡು ಠಾಣೆಯನ್ನು ಸುತ್ತುವರೆದಿದೆ. ಪ್ರತಿಭಟನಾಕಾರರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

Comments are closed.