ರಾಷ್ಟ್ರೀಯ

ಆಂಧ್ರಪ್ರದೇಶದ ಮತದಾರರ ಪಟ್ಟಿಯಲ್ಲಿ ಮೂರೂವರೆ ಶತಮಾನದ ಹಿಂದಿನ ವ್ಯಕ್ತಿ!

Pinterest LinkedIn Tumblr


ವಿಜಯವಾಡ: ಚುನಾವಣೆ ಬಂತೆಂದರೆ ಎಂತಹ ಪವಾಡಗಳು ಬೇಕಾದರೂ ನಡೆಯುತ್ತವೆ. ಸತ್ತವರನ್ನು ಮತದಾರರ ಪಟ್ಟಿಯಲ್ಲಿ ಬದುಕಿಸುವ, ಬದುಕಿರುವವರನ್ನು ಸಾಯಿಸುವ ಪ್ರಕ್ರಿಯೆಗಳೆಲ್ಲ ಕಳ್ಳ ವ್ಯವಹಾರಗಳಂತೆ ನಡೆಯುತ್ತಲೇ ಇರುತ್ತದೆ. ಆದರೆ, ಆಂಧ್ರಪ್ರದೇಶದಲ್ಲಿ ನಡೆದಿರುವ ಪ್ರಮಾದ ಮಾತ್ರ ಚುನಾವಣಾ ಆಯೋಗವೇ ತಲೆ ತಗ್ಗಿಸುವಂಥದ್ದು.

ಚುನಾವಣಾ ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರ ಹೆಸರು, ತಪ್ಪು-ತಪ್ಪು ವಿಳಾಸಗಳೆಲ್ಲ ಸರ್ವೇ ಸಾಮಾನ್ಯ. ಒಂದೊಂದು ರಾಜ್ಯದಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಅಂತಿಮಗೊಳಿಸುವಾಗ ಇಂತಹ ತಪ್ಪುಗಳೆಲ್ಲ ಆಗುತ್ತವೆ. ಆದರೆ, ಆಂಧ್ರಪ್ರದೇಶದಲ್ಲಿ ಮತದಾರರ ಪಟ್ಟಿಯ ಪ್ರಕಾರ 352 ವರ್ಷಗಳಿಂದ ವ್ಯಕ್ತಿಯೊಬ್ಬ ಜೀವಂತವಾಗಿದ್ದಾನೆ ಮತ್ತು ಪ್ರತಿ ಚುನಾವಣೆಯಲ್ಲಿ ಆತ ಮತ ಚಲಾಯಿಸುತ್ತಿದ್ದಾನೆ!

ಈ ವಿಷಯ ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇದು ಸತ್ಯ ಸಂಗತಿ. ಆಂಧ್ರಪ್ರದೇಶದಲ್ಲಿ ಚುನಾವಣಾ ಆಯೋಗದ ರಾಜ್ಯ ಘಟಕ ನಡೆಸಿದ ಸಮೀಕ್ಷೆಯಲ್ಲಿ ನಕಲಿ ಮತದಾರರ ಹೆಸರು ಮತ್ತು ದೋಷಪೂರಿತ ಹೆಸರುಗಳು ಸಾಕಷ್ಟು ಸಂಖ್ಯೆಯಲ್ಲಿ ಪತ್ತೆಯಾಗಿದ್ದು, ಪಟ್ಟಿಯಲ್ಲಿರುವ ಒಬ್ಬ ಮತದಾರನ ವಯಸ್ಸು 352 ಎಂದು ದಾಖಲಾಗಿದೆ. ಈ ಮಹಾನುಭಾವ ಮೂರೂವರೆ ಶತಮಾನದಿಂದ ಜೀವಂತವಾಗಿದ್ದಾನೆ. ಈ ಸಂಗತಿಯನ್ನು ಪತ್ತೆ ಹಚ್ಚುವ ಮೂಲಕ ಸಾಧನೆ ಮಾಡಿದೆ ಎಂದರೆ ತಪ್ಪಾಗಲಾರದು. ಇಂತಹ ಅನೇಕ ದೋಷಗಳು ಮತದಾರರ ಪಟ್ಟಿಯಲ್ಲಿ ಪತ್ತೆಯಾಗಿದ್ದು, ಆಯೋಗದ ಈ ಮಹಾಪ್ರಮಾದ ಸದ್ಯಕ್ಕೆ ಎಲ್ಲೆಡೆ ಟ್ರೋಲ್​ ಆಗುತ್ತಿದೆ.

ಆಂಧ್ರಪ್ರದೇಶದಲ್ಲಿ 3.6 ಕೋಟಿ ಮತದಾರರ ಹೆಸರು ನೋಂದಾವಣಿಯಾಗಿದೆ. ಇವರಲ್ಲಿ 52.67 ಲಕ್ಷಮತದಾರರ ಹೆಸರುಗಳು ದೋಷಪೂರಿತವಾಗಿವೆ. ಒಬ್ಬನಿಗೆ ಎರಡು ಗುರುತಿನ ಚೀಟಿ, ಅಸ್ತಿತ್ವವಿಲ್ಲದ ಮನೆ ಸಂಖ್ಯೆಗಳು ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡು ಕಡೆ ಮತದಾನದ ಹಕ್ಕು ಇಂತಹ ಸಾವಿರಾರು ದೋಷಗಳು ಪತ್ತೆಯಾಗಿವೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

Comments are closed.