ರಾಷ್ಟ್ರೀಯ

ಅಯೋಧ್ಯೆಯಲ್ಲಿ ಸಾರಾಯಿ, ಮಾಂಸಾಹಾರ ನಿಷೇಧಕ್ಕೆ ಮುಂದಾದ ಯೋಗಿ ಆದಿತ್ಯನಾಥ

Pinterest LinkedIn Tumblr

ಲಕ್ನೋ : ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಫೈಜಾಬಾದ್ ನಗರವನ್ನು ಅಯೋಧ್ಯ ಎಂದು ಮರುನಾಮಕರಣ ಮಾಡಿತ್ತು. ಇದರ ಬೆನ್ನಲ್ಲೇ ತಮ್ಮ ಈ ಜಿಲ್ಲೆಯಲ್ಲಿ ಮದ್ಯ ಮತ್ತು ಮಾಂಸಾಹಾರವನ್ನು ಕೂಡ ನಿಷೇಧ ಮಾಡಲು ಅಲ್ಲಿನ ಬಿಜೆಪಿ ಸರ್ಕಾರ ಮುಂದಾಗಿದೆ.

ಈ ಜಿಲ್ಲೆಯ ಕೆಲ ಸ್ವಾಮೀಜಿಗಳು ಈ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಲ್ಲಿ ಬೇಡಿಕೆಯಿಟ್ಟಿದ್ದರು. ಆ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಈ ಬಗ್ಗೆ ಚಿಂತನೆ ನಡೆಸಿರುವುದಾಗಿ ಉತ್ತರಪ್ರದೇಶದ ಸರ್ಕಾರದ ವಕ್ತಾರ ಶ್ರೀಕಾಂತ್​ ಶರ್ಮ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಸದ್ಯದಲ್ಲೇ ಸರ್ಕಾರ ಮಧ್ಯ ಮತ್ತು ಮಾಂಸಾಹಾರ ಮಾರಾಟವನ್ನು ನಿಷೇಧಿಸುವ ಬಗ್ಗೆ ತೀರ್ಮಾನಕ್ಕೆ ಬರಲಿದೆ. ಹಲವು ಶತಮಾನಗಳಿಂದ ಧಾರ್ಮಿಕ ಕೇಂದ್ರವಾಗಿರುವ ಅಯೋಧ್ಯೆಯಲ್ಲಿ ಮಾಂಸಾಹಾರ ಮತ್ತು ಮದ್ಯವನ್ನು ಮಾರಾಟ ಮಾಡುವುದು ಸರಿಯಲ್ಲ. ಇವುಗಳನ್ನು ನಿಷೇಧ ಮಾಡುವುದರಿಂದ ಆರೋಗ್ಯಕರ ಜೀವನಶೈಲಿಗೂ ಸಹಾಯವಾಗುತ್ತದೆ. ಹಾಗೇ, ಮಾಂಸಾಹಾರವನ್ನು ತ್ಯಜಿಸುವುದರಿಂದ ಸ್ವಚ್ಛತೆಯೂ ಹೆಚ್ಚಿ, ಮಾಲಿನ್ಯ ಪ್ರಮಾಣವೂ ಕಡಿಮೆಯಾಗಲಿದೆ. ಹಾಗಾಗಿ, ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುವುದು ಎಂದಿದ್ದಾರೆ.

ಸರ್ಕಾರದಿಂದ ಮದ್ಯ ಮತ್ತು ಮಾಂಸಾಹಾರ ನಿಷೇಧಕ್ಕೆ ಚಿಂತನೆ ನಡೆಸುತ್ತಿರುವ ಬಗ್ಗೆ ಈಗಾಗಲೇ ಉತ್ತರ ಪ್ರದೇಶದಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿ ಸಸ್ಯಾಹಾರಿಗಳಿಗಿಂತ ಮಾಂಸಾಹಾರಿಗಳ ಸಂಖ್ಯೆ ಹೆಚ್ಚಿರುವುದರಿಂದ ಕೆಲವರು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೇ, ಇದರಿಂದ ಮದ್ಯ ಮತ್ತು ಮಾಂಸ ಮಾರಾಟಗಾರರಿಗೆ ಬಹಳ ಹೊಡೆತ ಬೀಳಲಿರುವುದರಿಂದ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅಲ್ಲಿನ ಮಾಂಸ ಮಳಿಗೆಗಳ ವ್ಯಾಪಾರಿಗಳು, ಕೆಲವರು ಇದೇ ವ್ಯಾಪಾರವನ್ನು ನಂಬಿಕೊಂಡು ಕುಟುಂಬ ನಡೆಸುತ್ತಿದ್ದಾರೆ. ಸರ್ಕಾರ ಈ ರೀತಿ ಮಾಂಸ ಮತ್ತು ಮದ್ಯದ ಮೇಲೆ ನಿಷೇಧ ಹೇರುವುದರಿಂದ ನಮ್ಮ ಆದಾಯಕ್ಕೆ ಹೊಡೆತ ಬೀಳಲಿದೆ. ಅಯೋಧ್ಯ ಎಂದು ಹೆಸರು ಬದಲಾವಣೆ ಮಾಡಿದ ಮಾತ್ರಕ್ಕೆ ಎಲ್ಲರೂ ಸಸ್ಯಾಹಾರಿಗಳಾಗಬೇಕು, ಸಾರಾಯಿ ಕುಡಿಯಬಾರದು ಎಂದು ನಿರ್ಬಂಧ ಹೇರುವುದು ತಪ್ಪಾಗುತ್ತದೆ. ಈಗಾಗಲೇ ಅಯೋಧ್ಯ ಜಿಲ್ಲೆಯಲ್ಲಿ 200ರಿಂದ 250 ಮಾಂಸದ ಅಂಗಡಿಗಳಿವೆ. ಅವರೆಲ್ಲ ಮುಂದೆ ಏನು ಮಾಡಬೇಕು? ಎಂದಿದ್ದಾರೆ.

Comments are closed.