ನವದೆಹಲಿ: ಪ್ರತ್ಯೇಕ ರಾಷ್ಟ್ರಕ್ಕೆ ಜಮ್ಮು-ಕಾಶ್ಮೀರ ಒತ್ತಾಯಿಸುತ್ತಾ ಬಂದಿದೆ. ಇದೀಗ ಜಮ್ಮು-ಕಾಶ್ಮೀರದಿಂದ ಜಮ್ಮು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟದ ಕಿಡಿಯೊಂದು ಹೊತ್ತಿಕೊಂಡಿದೆ. ಮಾಜಿ ಎಡಪಂಥೀಯ, ಮಾಜಿ ಕಾಂಗ್ರೆಸ್ಸಿಗ, ಹಾಗೂ ಹೆಚ್ಚೂಕಡಿಮೆ ಮಾಜಿ ಬಿಜೆಗನೂ ಆಗಿರುವ ಲಾಲ್ ಸಿಂಗ್ ಎಂಬ ಯುವ ರಾಜಕಾರಣಿ ಇದೀಗ ಜಮ್ಮು ಪ್ರಾಂತ್ಯದಲ್ಲಿ ಜೋರು ಸದ್ದು ಮಾಡುತ್ತಿದ್ಧಾರೆ. ಜಮ್ಮುವಿನ ಪ್ರಮುಖ ಹಿಂದೂ ಸಮುದಾಯವಾದ ಡೋಗ್ರಾಕ್ಕೆ ಸೇರಿದ ಚೌಧರಿ ಲಾಲ್ ಸಿಂಗ್ ಅವರು ಜಮ್ಮುವಿನಲ್ಲಿ ನಡೆಸುವ ಸಮಾವೇಶಗಳಿಗೆ ಸಾವಿರಾರು ಜನರು ಜಮಾಯಿಸುತ್ತಾರೆ. ಇದು ಅವರ ಜನಪ್ರಿಯತೆಗೆ ಹಿಡಿದ ಕೈನ್ನಡಿಯಾಗಿದೆ. ಹಿಂದೂ ಏಕ್ತಾ ಮಂಚ್ ಎಂಬ ಹೊಸ ಸಂಘಟನೆಯನ್ನು ಹುಟ್ಟುಹಾಕಿದರುವ ಲಾಲ್ ಸಿಂಗ್ ಅವರು ಡೋಗ್ರಾವಷ್ಟೇ ಅಲ್ಲ, ಎಲ್ಲಾ ಹಿಂದೂಗಳನ್ನೂ ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾಶ್ಮೀರದ ರಾಜಕಾರಣಿಗಳಿಂದ ಜಮ್ಮುವಿಗೆ ಹಾನಿಯಾಗುತ್ತಿದೆ. ಶಾಂತಿಪ್ರಿಯ ಜನರಿರುವ ಜಮ್ಮು ಪ್ರದೇಶವನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ತೋರ್ಪಡಿಸುವ ಲಾಲ್ ಸಿಂಗ್, ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಕಾಶ್ಮೀರದಿಂದಲೇ ಜಮ್ಮುವನ್ನು ಪ್ರತ್ಯೇಕಗೊಳಿಸಲು ಹೋರಾಟ ಪ್ರಾರಂಭಿಸಬೇಕಾಗಬಹುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಯಾರು ಈ ಲಾಲ್ ಸಿಂಗ್?
ಕಾಶ್ಮೀರದ ಕಟುವಾದಲ್ಲಿ 8 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ಮತ್ತು ಹತ್ಯೆ ಘಟನೆ ಆದ ನಂತರ ಹಿಂದೂ ಸಮುದಾಯದ ಏಳೆಂಟು ಮಂದಿಯನ್ನು ಬಂಧಿಸಲಾಗಿತ್ತು. ಆಗ ಆರೋಪಿಗಳಿಗೆ ಸಹಾನುಭೂತಿ ವ್ಯಕ್ತಪಡಿಸಿ, ಈ ಪ್ರಕರಣದಲ್ಲಿ ಬೇರೆ ಪಿತೂರಿ ಇದು ಎಂದು ಆಪಾದಿಸಿ, ಸಿಬಿಐನಿಂದ ಪ್ರಕರಣದ ತನಿಖೆಯಾಗಲಿ ಎಂದು ಒತ್ತಾಯಿಸಿ ಸ್ವಲ್ಪಮಟ್ಟಿಗೆ ದೊಡ್ಡ ಹೋರಾಟಗಳು ನಡೆದಿದ್ದವು. ಆ ಹೋರಾಟಗಳಲ್ಲಿ ಆಡಳಿತಾರೂಢ ಮೈತ್ರಿಕೂಟದ ಭಾಗವಾದ ಬಿಜೆಪಿಯ ಇಬ್ಬರು ಸಚಿವರು ಪಾಲ್ಗೊಂಡಿದ್ದರು. ಆ ಇಬ್ಬರಲ್ಲಿ ಲಾಲ್ ಸಿಂಗ್ ಕೂಡ ಒಬ್ಬರು. ಅತ್ಯಾಚಾರ ಆರೋಪಿಗಳ ಪರವಾಗಿ ಬಿಜೆಪಿಯವರು ನಿಂತಿದ್ದಾರೆಂಬ ಟೀಕೆಗಳು ವ್ಯಕ್ತವಾಗುತ್ತಿರುವಂತೆಯೇ ಲಾಲ್ ಸಿಂಗ್ ಮತ್ತು ಚಂದ್ರ ಪ್ರಕಾಶ್ ಗಂಗಾ ಅವರು ಸಂಪುಟಕ್ಕೆ ರಾಜೀನಾಮೆ ಕೊಟ್ಟು ಹೊರಬಂದರು.
ಲಾಲ್ ಸಿಂಗ್ ಅವರು ಬಿಜೆಪಿ ಸೇರಿದ್ದು 2014ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ. ರಾಜಕಾರಣಿಗಳ ಕುಟುಂಬದಿಂದ ಬಂದ ಲಾಲ್ ಸಿಂಗ್ ಅವರ ತಂದೆ ಪ್ರೋಗ್ರೆಸ್ಸಿವ್ ಗ್ರೂಪ್ ಎಂಬ ಎಡಪಂಥೀಯ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದರು. ಅಪ್ಪನಂತೆ ತಾನೂ ರಾಜಕಾರಣಿಯಾಗಬೇಕೆಂದುಕೊಂಡ ಲಾಲ್ ಸಿಂಗ್ ಅವರು 1996ರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಬಸೋಲಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಭರ್ಜರಿಯಾಗಿ ರಾಜಕೀಯ ಪ್ರವೇಶ ಮಾಡಿದರು. ಕಾಂಗ್ರೆಸ್-ಪಿಡಿಪಿ ಮೈತ್ರಿಕೂಟ ಸರಕಾರದಲ್ಲಿ ಅವರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯ ಸಚಿವರಾಗುವ ಮಹದ್ ಅವಕಾಶವೂ ಪ್ರಾಪ್ತಿಯಾಯಿತು.
ಮಂತ್ರಿಯಾಗಿ ಇವರು ಮಾಡಿದ ಕೆಲಸಗಳು ವಿವಾದದ ಜೊತೆಗೆ ಪ್ರಶಂಸೆಗೂ ಪಾತ್ರವಾಗಿವೆ. ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾಶ್ಮೀರದ 231 ವೈದ್ಯರನ್ನು ಅವರು ಅಮಾನತುಗೊಳಿಸುವ ಕೆಲಸ ಮಾಡಿದ್ದರು. ಮನೆಯಲ್ಲಿ ಖಾಸಗಿಯಾಗಿ ಕ್ಲಿನಿಕ್ ಇಟ್ಟುಕೊಂಡಿದ್ದ ಸರಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರ ಮನೆಯ ಮೇಲೆ ದಾಳಿ ಮಾಡಿಸಿ ಸೈ ಎನಿಸಿದ್ದರು.
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದು:
ಅದಾದ ನಂತರ ಲಾಲ್ ಸಿಂಗ್ ಅವರನ್ನು ಉಧಮ್ಪುರದ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಟ್ಟು ನಿಲ್ಲಿಸಲಾಯಿತು. ಇಷ್ಟವಿಲ್ಲದಿದ್ದರೂ ಉಧಮ್ಪುರದಲ್ಲಿ ಸ್ಪರ್ಧಿಸಿದ ಲಾಲ್ ಸಿಂಗ್ ಅಲ್ಲಿಯೂ ಗೆದ್ದು ಸಂಸದರಾದರು. ತಾನು ಸಚಿವನಾಗಿ ಮಾಡಿದ ಸಾಧನೆಯು ಪಕ್ಷದವರಿಗೆ ಹಿಡಿಸಲಿಲ್ಲ. ಅದಕ್ಕಾಗಿ ತನ್ನನ್ನು ಲೋಕಸಭೆಗೆ ಕಳುಹಿಸುವ ಏರ್ಪಾಟು ಮಾಡಿದರು ಎಂದು ಲಾಲ್ ಸಿಂಗ್ ಹೇಳುತ್ತಾರೆ.
2009ರಲ್ಲಿ ಮತ್ತೊಮ್ಮೆ ಲೋಕಸಭೆ ಪ್ರವೇಶ ಮಾಡುತ್ತಾರೆ. ಆದರೆ, 2014ರಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಅವರಿಗೆ ದಕ್ಕೋದಿಲ್ಲ. ಇದರಿಂದ ಅಸಮಾಧಾನಗೊಂಡ ಚೌಧರಿ ಲಾಲ್ ಸಿಂಗ್ ಅದೇ ವರ್ಷದಂದು ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರುತ್ತಾರೆ.
2014ರ ವಿಧಾನಸಭೆಯಲ್ಲಿ ಸ್ಪರ್ಧಿಸಿ ಗೆದ್ದು ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗುತ್ತಾರೆ. ಮುಫ್ತಿ ಮೊಹಮ್ಮದ್ ಸಯದ್ ನಿಧನದ ನಂತರ ಅವರ ಮಗಳು ಮೆಹಬೂಬ ಮುಫ್ತಿ ಸಿಎಂ ಆದಾಗ ಲಾಲ್ ಸಿಂಗ್ ಅವರಿಗೆ ಅರಣ್ಯ ಮತ್ತು ಪರಿಸರ ಖಾತೆ ಕೊಡಲಾಗುತ್ತದೆ. ಅತ್ಯಾಚಾರ ಪ್ರಕರಣದ ವಿವಾದದ ಮಧ್ಯೆ ಲಾಲ್ ಸಿಂಗ್ ಅವರು ಸರಕಾರದಿಂದ ಹೊರಬಂದ ನಂತರ ಬೇರೆ ಕಾರಣಗಳಿಂದಾಗಿ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ಬಿದ್ದುಹೋಗಿದೆ. ಇದೀಗ ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತವಿದೆ.
ಶಕ್ತಿ ವೃದ್ಧಿಸಿಕೊಳ್ಳುತ್ತಿರುವ ಲಾಲ್ ಸಿಂಗ್:
ಈಗ ಆಡಳಿತದಲ್ಲಿಲ್ಲದ ಲಾಲ್ ಸಿಂಗ್ ಚೌಧರಿ ಅವರು ಹಿಂದೆಂದಿಗಿಂತಲೂ ಚುರುಕಾಗಿದ್ದಾರೆ. ಬಿಜೆಪಿಯನ್ನೂ ಮೀರಿ ಬೆಳೆಯುವ ಸನ್ನಾಹದಲ್ಲಿದ್ದಾರೆ. ಜಮ್ಮುವಿನಲ್ಲಿ ಲಾಲ್ ಸಿಂಗ್ ಅವರು ಪ್ರಮುಖ ರಾಜಕೀಯ ನೇತಾರನಾಗುವ ಎಲ್ಲಾ ಸೂಚನೆಯನ್ನೂ ರವಾನಿಸಿದ್ದಾರೆ. ಡೋಗ್ರಾ ಸ್ವಾಭಿಮಾನ್ ಸಂಘಟನ್ ಎಂಬ ಸಂಘಟನೆಯ ಮೂಲಕ ಪ್ರಬಲ ಡೋಗ್ರಾ ಸಮುದಾಯದ ಅಗ್ರ ನಾಯಕನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಹಿಂದೂ ಏಕ್ತಾ ಮಂಚ್ ಮೂಲಕ ಜಮ್ಮುವಿನಲ್ಲಿ ಡೋಗ್ರಾ ಜೊತೆ ಬೇರೆ ಹಿಂದೂ ಸಮುದಾಯಗಳನ್ನೂ ಒಟ್ಟಿಗೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಇಡೀ ಮುಸ್ಲಿಮೇತರರನ್ನೂ ಒಗ್ಗೂಡಿಸುವ ಮೂಲಕ ಜಮ್ಮು ಪ್ರಾಂತ್ಯದ ಪ್ರಶ್ನಾತೀತ ಮುಖಂಡನಾಗಿ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಪ್ರತ್ಯೇಕ ರಾಜ್ಯಕ್ಕಾಗಿ ಕೂಗು:
ಕಾಶ್ಮೀರದ ರಾಜಕಾರಣಿಗಳ ಸ್ವಾರ್ಥತೆಯಿಂದಾಗಿ ಶಾಂತಿಯುವ ಜಮ್ಮು ಜನರು ಕಷ್ಟ ಅನುಭವಿಸುತ್ತಿದ್ದಾರೆ. ಜಮ್ಮು ಪ್ರಾಂತ್ಯವು ಹಿಂದುಳಿಯಲು ಕಾಶ್ಮೀರಿಗರೇ ಕಾರಣ ಎಂಬುದು ಲಾಲ್ ಸಿಂಗ್ ವಾದ. ಜಮ್ಮುವಿನ ಅಭಿವೃದ್ಧಿಗೆ ಲಾಲ್ ಸಿಂಗ್ ಕೆಲ ಸೂತ್ರಗಳನ್ನ ನೀಡಿ ಅದನ್ನು ಜಾರಿಗೆ ತರಲು ಆಗ್ರಹಪಡಿಸುತ್ತಿದ್ಧಾರೆ. ಆ 25 ಅಂಶಗಳ ದಾಖಲೆಯ ಕೆಲ ಪ್ರಮುಖ ಅಂಶಗಳು ಇಲ್ಲಿವೆ:
* ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯಗಳಿಂದ ಸರಣಿ ಪ್ರಕಾರ ಸಿಎಂ ಬದಲಾವಣೆಯಾಗಬೇಕು. ಈ ಬಾರಿ ಕಾಶ್ಮೀರದವರು ಸಿಎಂ ಆದರೆ, ಮುಂದಿನ ಬಾರಿ ಜಮ್ಮುವಿನವರು ಸಿಎಂ ಆಗಬೇಕು. ಇದು ಪಕ್ಷಭೇದವಿಲ್ಲದೆ ನಡೆಯಬೇಕು.
* ಡೋಗ್ರಾ ಸಮುದಾಯಕ್ಕೆ ಮೀಸಲಾತಿ ಕೊಡಬೇಕು
* ಮುಸ್ಲಿಮರನ್ನು ಹೊರತುಪಡಿಸಿ ಉಳಿದವರಾದ ಹಿಂದೂ, ಸಿಖ್ ಮತ್ತಿತರರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೊಡಬೇಕು.
ಬಿಜೆಪಿಗೆ ತಲೆನೋವಾ?
ಚೌಧರಿ ಲಾಲ್ ಸಿಂಗ್ ಅವರು ಬಿಜೆಪಿಯನ್ನು ತೊರೆದಿಲ್ಲವಾದರೂ ಈಗಾಗಲೇ ತಮ್ಮದೇ ಸಂಘಟನೆ ಕಟ್ಟಿಕೊಂಡು ಇಡೀ ಜಮ್ಮುವನ್ನು ಸುತ್ತುತ್ತಿದ್ಧಾರೆ. ಕಟುವಾ ಪ್ರಕರಣದ ನಂತರ ಲಾಲ್ ಸಿಂಗ್ ಬರೋಬ್ಬರಿ 700 ಸಮಾವೇಶಗಳನ್ನ ಆಯೋಜಿಸಿದ್ಧಾರೆ. ಪ್ರತೀ ಸಮಾವೇಶದಲ್ಲೂ ಸಾವಿರಾರು ಜನರು ಉಪಸ್ಥಿತಿ ಇರುವುದು ಲಾಲ್ ಸಿಂಗ್ ಜನಪ್ರಿಯತೆಯ ದ್ಯೋತಕವಾಗಿದೆ.
ಇಷ್ಟೇ ಆಗಿದ್ದರೆ ಬಿಜೆಪಿ ಖುಷಿಯಾಗಿರುತ್ತಿತ್ತು. ಆದರೆ, ಲಾಲ್ ಸಿಂಗ್ ಅವರು ತಮ್ಮದೇ ಸಂಘಟನೆಯ ಮೂಲಕ ಚುನಾವಣೆ ಎದುರಿಸುವ ಪ್ಲಾನ್ ಮಾಡಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಲಾಲ್ ಸಿಂಗ್ ಹೊಸ ಪಕ್ಷವನ್ನು ಕಟ್ಟಿ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದಾರಂತೆ. ಹಾಗೆಯೇ, ಲಾಲ್ ಸಿಂಗ್ ಅವರು ಬಹಿರಂಗವಾಗಿಯೇ ಬಿಜೆಪಿ ಬಗ್ಗೆ ಅಸಮಾಧಾನ ತೋರ್ಪಡಿಸುತ್ತಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಡೋಗ್ರಾದವರನ್ನು ಅವಮಾನಿಸಿದ್ದಾರೆ. ನನಗೆ ನನ್ನ ಸಮುದಾಯದ ಬೆಂಬಲ ಸಿಗುತ್ತಿದೆ. ಹೊಸ ರಾಜಕೀಯ ಪಕ್ಷ ಸ್ಥಾಪನೆ ಬೇಕಾದರೂ ಮಾಡುತ್ತೇನೆ. ನೋಡೋಣ, ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ ಎಂದು ಲಾಲ್ ಸಿಂಗ್ ಹೇಳಿದ್ದಾರೆ.
ಬಿಜೆಪಿಯ ಸ್ಥಳೀಯ ನಾಯಕರು ಲಾಲ್ ಸಿಂಗ್ ಅವರ ಸಾಮರ್ಥ್ಯವನ್ನು ಗುರುತಿಸಿದ್ದಾರೆ. 2019ರ ಚುನಾವಣೆಗಳಲ್ಲಿ ಲಾಲ್ ಸಿಂಗ್ ಅವರ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ಜಮ್ಮುವಿನ ಅರ್ಧ ಭಾಗದಷ್ಟು ಪ್ರದೇಶಗಳಲ್ಲಿ ಲಾಲ್ ಸಿಂಗ್ ನಿರ್ಣಾಯಕರಾಗಿರುತ್ತಾರೆ ಎಂದು ಬಿಜೆಪಿಯವರೂ ಒಪ್ಪಿಕೊಳ್ಳುತ್ತಾರೆ. ಕರ್ನಾಟಕದಲ್ಲಿ 2013ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಕೆಜೆಪಿ ಪಕ್ಷವು ಬಿಜೆಪಿಗೆ ಮಾಡಿದ ರೀತಿಯಲ್ಲಿ ಲಾಲ್ ಸಿಂಗ್ ಅವರು ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಗೆ ಡ್ಯಾಮೇಜ್ ಮಾಡುತ್ತಾರಾ? ಅಥವಾ ಲಾಲ್ ಸಿಂಗ್ ಅವರು ಕಿಂಗ್ ಮೇಕರ್ ಆಗುತ್ತಾರಾ? ಅಥವಾ ಅವರೇ ಕಿಂಗ್ ಆಗುತ್ತಾರಾ ಎಂದು ಕಾದುನೋಡಬೇಕು.
Comments are closed.