ನವದೆಹಲಿ: ನೋಟು ಅಮಾನ್ಯ ಮಾಡಿ, ಇಂದಿಗೆ ಎರಡು ವರ್ಷವಾದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ನೋಟು ಅಮಾನ್ಯೀಕರಣ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ.
ನೋಟು ಅಮಾನ್ಯೀಕರಣ ಪ್ರತಿಯೊಬ್ಬರನ್ನೂ ಕಾಡಿದೆ. ಎಲ್ಲಾ ವರ್ಗದವರ ಆರ್ಥಿಕ ವಹಿವಾಟಿಗೂ ಪೆಟ್ಟು ಕೊಟ್ಟಿದೆ. ನೋಟು ರದ್ದತಿ ಅರ್ಥ ವ್ಯವಸ್ಥೆ ಸುಧಾರಣೆಗೆ ಮದ್ದು ಎಂದು ಬಿಂಬಿಸಲಾಗಿತ್ತು. ಆದರೆ ನೋಟು ಅಮಾನ್ಯೀಕರಣ ವಿತ್ತ ವ್ಯವಸ್ಥೆ ಸುಧಾರಿಸಿಕೊಳ್ಳಲಾರದಂತೆ ಮಾಡಿತು ಎಂದು ಮನಮೋಹನ್ ಸಿಂಗ್ ಹೇಳಿದರು.
ಜಿಡಿಪಿ ಕುಸಿತಕ್ಕೆ ನೋಟು ಅಮಾನ್ಯೀಕರಣವೇ ಕಾರಣ. ಆ ಶಾಕ್ ನಿಂದ ಇಂದಿಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ಸುಧಾರಿಸಿಕೊಳ್ಳಲು ಆಗಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚುವುದಕ್ಕೂ ನೋಟು ಅಮಾನ್ಯವೇ ಕಾರಣ. ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳಕ್ಕೂ ನೋಟು ಅಮಾನ್ಯೀಕರಣವೇ ಕಾರಣ ಎಂದು ಡಾ. ಮನಮೋಹನ್ ಸಿಂಗ್ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2016 ನವೆಂಬರ್ 8ರಂದು 500 ಮತ್ತು 1000 ಮುಖಬೆಲೆಯ ನೋಟನ್ನು ರದ್ದು ಮಾಡಿದ್ದರು. ಆ ವೇಳೆ ಹಣಕ್ಕಾಗಿ ಜನರು ಎಟಿಎಂ, ಬ್ಯಾಂಕ್ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು, ಹಣ ಪಡೆದುಕೊಳ್ಳಬೇಕಾಯಿತು. ಆನಂತರ ಕೇಂದ್ರ ಸರ್ಕಾರ 200,500, ಮತ್ತು 2000 ಮುಖಬೆಲೆಯ ಹೊಸ ನೋಟನ್ನು ಚಲಾವಣೆಗೆ ತಂದಿತ್ತು. ನೋಟು ರದ್ದತಿಯಿಂದ ಒಂಭತ್ತು ಲಕ್ಷ ಕೋಟಿ ನಷ್ಟವಾಗಿದೆ ಎಂದು ಆರ್ಬಿಐ ಗೌವರ್ನರ್ ಊರ್ಜಿತ್ ಪಟೇಲ್ ಅವರು ಈಚೆಗಷ್ಟೇ ಹೇಳಿದ್ದರು. ಇದೀಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮತ್ತೆ ನೋಟು ಅಮಾನ್ಯೀಕರಣ ಕ್ರಮವನ್ನು ಉಗ್ರವಾಗಿ ಟೀಕಿಸಿದ್ದಾರೆ. ಇದಷ್ಟೇ ಅಲ್ಲದೇ, ಇಂದು ಕಾಂಗ್ರೆಸ್ ಪ್ರಧಾನಿಯವರ ಈ ಕ್ರಮವನ್ನು ಖಂಡಿಸಿ, ಪ್ರತಿಭಟನೆಯನ್ನು ಮಾಡಲಿದೆ.
Comments are closed.