ರಾಷ್ಟ್ರೀಯ

ಸೊಂಟದ ಸುತ್ತಳತೆ ಕನಿಷ್ಠ 36 ಇಂಚಿಗೆ ತಗ್ಗಿಸುವಂತೆ ಪೊಲೀಸರಿಗೆ ಸೂಚನೆ

Pinterest LinkedIn Tumblr


ಅಹಮದಾಬಾದ್: ಗುಡಾಣ ಹೊಟ್ಟೆ ಹೊಂದಿರುವ ಅಹಮದಾಬಾದ್ ಪೊಲೀಸರಿಗೆ ಈ ಬಾರಿಯ ದೀಪಾವಳಿ ಸಿಹಿಯಾಗಿಲ್ಲ. ಕಾರಣ ಆದಷ್ಟು ಬೇಗ ದೇಹದ ಗಾತ್ರ ಕಡಿಮೆ ಮಾಡಿಕೊಳ್ಳಬೇಕೆಂದು ಇಲಾಖೆ ಅವರಿಗೆ ಕಟ್ಟುನಿಟ್ಟಾಗಿ ಆದೇಶಿಸಿದೆ. ತಮ್ಮ ಕರ್ತವ್ಯದಲ್ಲಿ ಹೆಚ್ಚು ಕ್ರಿಯಾಶೀಲರಾಗಲು ಅನುಕೂಲವಾಗುವಂತೆ ಸೊಂಟದ ಸುತ್ತಳತೆಯನ್ನು ಕನಿಷ್ಠ 36 ಇಂಚಿಗೆ ತಗ್ಗಿಸುವಂತೆ ಅವರಿಗೆ ಸೂಚನೆ ನೀಡಲಾಗಿದೆ.

ನಮ್ಮ ವಿಭಾಗದಲ್ಲಿ ಒಟ್ಟು 150ಕ್ಕಿಂತ ಹೆಚ್ಚು ಪೊಲೀಸರನ್ನು ಗುರುತಿಸಲಾಗಿದ್ದು, ಅವರ ಸೊಂಟದಳತೆ 42ರಿಂದ 44 ಇಂಚಿದೆ. ಈ ಪಟ್ಟಿಯಲ್ಲಿ 7 ಜನ ಸಬ್ ಇನ್ಸಪೆಕ್ಟರ್, 144 ಅಸಿಸ್ಟೆಂಟ್ ಸಬ್ ಇನ್ಸಪೆಕ್ಟರ್, ಮುಖ್ಯ ಪೇದೆಗಳು, ಪೇದೆಗಳು ಮತ್ತು ಲೋಕರಕ್ಷಕರು ಸೇರಿದ್ದಾರೆ ಎಂದು, ಸೆಕ್ಟರ್ -2 ನ ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಯಾದವ್ ತಿಳಿಸಿದ್ದಾರೆ.

ಕಚೇರಿಯಲ್ಲಿ ಕುಳಿತಿರುವುದು ಪೊಲೀಸರ ಕೆಲಸವಲ್ಲ. ಔಟ್ ಡ್ಯೂಟಿ ಮಾಡುವುದೇ ಅವರ ಕರ್ತವ್ಯವಾದ್ದರಿಂದ ಫಿಟ್ನೆಸ್ ಒಂದು ಮೂಲಭೂತ ಅವಶ್ಯಕತೆಯಾಗಿದೆ. ಆರೋಪಿಗಳನ್ನು ಬೆನ್ನಟ್ಟುವಾಗ ಸ್ಥೂಲಕಾಯತೆ ಬಹುದೊಡ್ಡ ತಡೆಯಾಗುತ್ತಿದೆ ಎಂದು ಯಾದವ್ ಹೇಳಿದ್ದಾರೆ.

ಆಸ್ಪತ್ರೆಗಳೊಂದಿಗೆ ಟೈ- ಅಪ್ ಮಾಡಿಕೊಳ್ಳಲಾಗಿದ್ದು, ಮೂರು ತಿಂಗಳ ಕಾಲ ನಮ್ಮ ಪೊಲೀಸರಿಗೆ ತೂಕ ಇಳಿಸಿಕೊಳ್ಳಲು ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ಡಯಟ್ ಮತ್ತು ದೈಹಿಕ ಕಸರತ್ತಿನ ಮೂಲಕ ಬೊಜ್ಜನ್ನು ಕರಗಿಸಿಕೊಳ್ಳುವ ಪೊಲೀಸರು ನಾವು ನೀಡಿರುವ ಗುರಿಯನ್ನು ತಲುಪಿದರೆ 2,000 ರೂಪಾಯಿ ನಗದು ಬಹುಮಾನ ಪಡೆಯಲಿದ್ದಾರೆ, ಎಂದವರು ತಿಳಿಸಿದ್ದಾರೆ.

Comments are closed.