ರಾಷ್ಟ್ರೀಯ

ರಾಜಸ್ಥಾನದಲ್ಲಿ ಚುನಾವಣೆಪೂರ್ವ ಸಮೀಕ್ಷೆ: ಬಿಜೆಪಿಗೆ ಮುಖಭಂಗ

Pinterest LinkedIn Tumblr


ನವದೆಹಲಿ: ವಸುಂಧರಾ ರಾಜೆ ಸಿಂಧ್ಯ ಆಡಳಿತವಿರುವ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವುದು ಬಹುತೇಕ ನಿಶ್ಚಿತ ಎಂದು ಸಮೀಕ್ಷೆಯೊಂದು ಸುಳಿವು ನೀಡಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಗದ್ದುಗೆ ಹಿಡಿಯಲಿದೆ ಎಂದು ಸಿಎನ್​ಎಕ್ಸ್ ಚುನಾವಣೆ ಪೂರ್ವ ಸಮೀಕ್ಷೆ ಅಭಿಪ್ರಾಯಪಟ್ಟಿದೆ. 200 ಸೀಟುಗಳ ರಾಜಸ್ಥಾನ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಪಕ್ಷ 110-120 ಸ್ಥಾನಗಳನ್ನ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಬಿಜೆಪಿಗೆ 70-80 ಸೀಟುಗಳು ಮಾತ್ರ ದಕ್ಕಬಹುದು. ಮಾಯಾವತಿ ಅವರ ಬಿಎಸ್​ಪಿ ಪಕ್ಷ 1-3 ಸ್ಥಾನಗಳನ್ನ ಗೆಲ್ಲುವ ಸಾಧ್ಯತೆ ಇದೆ ಎಂಬುದು ಈ ಸಮೀಕ್ಷೆಯಿಂದ ತಿಳಿದುಬರುತ್ತಿದೆ.

ಸಿಎನ್​ಎಕ್ಸ್ ಮೀಡಿಯಾ ಸಂಸ್ಥೆಯು ಸೂಪರ್ 30 ಎಂಬ ವಿನೂತನ ವಿಧಾನವನ್ನು ಬಳಕೆ ಮಾಡಿದ್ದು, 67 ಕ್ಷೇತ್ರಗಳಾದ್ಯಂತ 8 ಸಾವಿರಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬರೋಬ್ಬರಿ 163 ಸ್ಥಾನಗಳನ್ನ ಗೆದ್ದು ಜಯಭೇರಿ ಭಾರಿಸಿತ್ತು. ಆದರೆ, ಕಳೆದ 5 ವರ್ಷಗಳಲ್ಲಿ ಬಿಜೆಪಿಯ ಆಡಳಿತ ಜನಪ್ರಿಯತೆ ಕಳೆದುಕೊಂಡಿದಂತಿದೆ. ಪದ್ಮಾವತ್ ಸಿನಿಮಾದ ವಿವಾದವು ಬಿಜೆಪಿಗೆ ಮುಳುವಾಗಿದೆಯಂತೆ. ಪದ್ಮಾವತ್ ಸಿನಿಮಾದಲ್ಲಿ ರಜಪೂತರನ್ನು ಅವಮಾನಿಸಲಾಗಿದೆ ಎಂದು ಹೇಳಿ ಆ ಸಮುದಾಯದವರು ಬೃಹತ್ ಪ್ರತಿಭಟನೆ ಮಾಡಿದ್ದರು. ರಾಜಸ್ಥಾನ ಸರಕಾರ ನಡೆದುಕೊಂಡ ರೀತಿಯು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಹರೂತಿ, ಮಾರವಾಡ, ಮೇವಾಡ ಮತ್ತು ಶೆಕಾವತಿ ಪ್ರದೇಶಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಸಿಎನ್​ಎಕ್ಸ್ ಸಮೀಕ್ಷೆ ಹೇಳಿದೆ.

ಡಿಸೆಂಬರ್ 7ರಂದು ನಡೆಯಲಿರುವ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬರೋಬ್ಬರಿ 43.5% ಮತ ಪ್ರಮಾಣ ಪಡೆಯುವ ಸಾಧ್ಯತೆ ಇದೆ ಎಂದು ಈ ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಕಳೆದ ಬಾರಿ ಶೇ. 33 ಮತ ಪಡೆದಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಹೈಜಂಪ್ ಮಾಡಲಿದೆ. ಕಳೆದ ಬಾರಿ ಶೇ. 45.17ರಷ್ಟು ಮತ ಪಡೆದಿದ್ದ ಬಿಜೆಪಿ ಈ ಬಾರಿ 40.37% ಮತಕ್ಕೆ ತೃಪ್ತಿಪಡಬೇಕಾಗಬಹುದು.

ಸಿಎನ್​ಎಕ್ಸ್ ಜನಸಮೀಕ್ಷೆ:
ರಾಜಸ್ಥಾನದಲ್ಲಿ ಒಟ್ಟು ಸ್ಥಾನಗಳು: 200

ಬಹುಮತಕ್ಕೆ ಅಗತ್ಯವಿರುವುದು 101
ಬಿಜೆಪಿ: 70-80
ಕಾಂಗ್ರೆಸ್: 110-120
ಬಿಎಸ್​ಪಿ: 1-3
ಇತರೆ: 7

ಈ ಸಮೀಕ್ಷೆ ತೆರೆದಿಟ್ಟಿರುವ ಮತ್ತೊಂದು ಮಹತ್ವದ ಅಂಶವೆಂದರೆ ರಾಜಸ್ಥಾನದ ಚುನಾವಣೆಯು ಕೇಂದ್ರದ ಜನಪ್ರಿಯತೆಯ ಮಾನದಂಡದ ಮೇಲೆ ನಡೆಯುವುದಿಲ್ಲವಂತೆ. ನರೇಂದ್ರ ಮೋದಿ ಈಗಲೂ ಸ್ವಲ್ಪಮಟ್ಟಿಗೆ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರಾದರೂ ರಾಜ್ಯ ಸರಕಾರದ ಕಾರ್ಯಸಾಧನೆ ಬಗ್ಗೆ ರಾಜಸ್ಥಾನಿಗರಿಗೆ ಅಸಮಾಧಾನವಿದೆ. ಈ ಕಾರಣಕ್ಕೆ ಬಿಜೆಪಿ ಸೋಲನುಭವಿಸಲಿದೆಯಂತೆ. ಮುಖ್ಯಮಂತ್ರಿಯಾಗಿ ವಸುಂಧರಾ ರಾಜೆ ಅವರ ಜನಪ್ರಿಯತೆ ಬಹುತೇಕ ನಶಿಸಿದೆ. ಅಲ್ಲದೆ, ಕಳೆದ 25 ವರ್ಷಗಳಿಂದ ರಾಜಸ್ಥಾನದಲ್ಲಿ ಒಂದೇ ಪಕ್ಷ ಸತತ 2 ಬಾರಿ ಅಧಿಕಾರ ಪಡೆದಿಲ್ಲ ಎಂಬುದನ್ನೂ ಇಲ್ಲಿ ಗಮನಿಸಬಹುದು.

ರಾಜಸ್ಥಾನದ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಸಚಿನ್ ಪೈಲಟ್ ಬಗ್ಗೆ ಜನಸಾಮಾನ್ಯರು ಭರವಸೆ ಇಟ್ಟುಕೊಂಡಿದ್ದಾರೆ. ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಜನಪ್ರಿಯತೆಯೂ ಕುಂದಿಲ್ಲದಿರುವುದು ಜನರ ಅಭಿಪ್ರಾಯದಿಂದ ವ್ಯಕ್ತವಾಗಿದೆ. ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಹಿಂದೇಟು ಹಾಕಿದ ಬಿಎಸ್​ಪಿ ಪಕ್ಷಕ್ಕೆ ಯಾವ ಲಾಭವೂ ಆಗುವ ಸಾಧ್ಯತೆ ಕಾಣುತ್ತಿಲ್ಲ.

ರಾಜಸ್ಥಾನದಲ್ಲಿ ಡಿ. 7ರಂದು ಒಂದೇ ಹಂತರದಲ್ಲಿ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶ, ಛತ್ತೀಸ್​ಗಡ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಲ್ಲೂ ಚುನಾವಣೆಗಳಾಗುತ್ತಿವೆ. ಈ ಐದೂ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮತದಾನ ಪ್ರಕ್ರಿಯೆ ಡಿ. 7ಕ್ಕೆ ಮುಕ್ತಾಯಗೊಳ್ಳುತ್ತದೆ. ಡಿ. 11ರಂದು ಎಲ್ಲಾ ಫಲಿತಾಂಶ ಪ್ರಕಟವಾಗುತ್ತದೆ. ರಾಜಸ್ಥಾನ, ಛತ್ತೀಸ್​​ಗಡ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಈ ಮೂರೂ ರಾಜ್ಯಗಳಲ್ಲೂ ಕಾಂಗ್ರೆಸ್ ಗೆಲ್ಲಬಹುದೆಂಬ ನಿರೀಕ್ಷೆ ಇದೆ.

Comments are closed.