ರಾಷ್ಟ್ರೀಯ

ಮೂರುವರೆ ವರ್ಷದ ಮಗುವಿನ ಮೇಲೆ ಶಾಲಾ ಬಸ್ ಚಾಲಕ ಅತ್ಯಾಚಾರ

Pinterest LinkedIn Tumblr


ನೋಯಿಡಾ: ಮೂರುವರೆ ವರ್ಷದ ಮಗುವಿನ ಮೇಲೆ ಆಕೆಯ ಶಾಲಾ ಬಸ್ ಚಾಲಕ ಲೈಂಗಿಕ ದೌರ್ಜನ್ಯ ಎಸಗಿದ ಪೈಶಾಚಿಕ ಕೃತ್ಯ ನೋಯಿಡಾದಲ್ಲಿ ಬೆಳಕಿಗೆ ಬಂದಿದೆ. ಮಗುವಿನ ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸಿದ್ದಾರೆ.

ಮಹಾನಗರದ ಸೆಕ್ಟರ್ ನಂಬರ್ 70ರಲ್ಲಿರುವ ಖಾಸಗಿ ಶಾಲೆಯಲ್ಲಿ ಓದುತ್ತಿರುವ ನಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಷ್ಟೇ ಅಲ್ಲದೇ, ಈ ಕುರಿತು ಯಾರಿಗಾದರೂ ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಸಹ ಹಾಕಲಾಗಿತ್ತು ಎಂದು ದೂರಿರುವ ಪೋಷಕರು ಸೂರದ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಕ್ಟೋಬರ್ 9 ರಂದು ಶಾಲೆಯಿಂದ ಮರಳಿ ಬಂದ ಮಗು ಅಳಲು ಪ್ರಾರಂಭಿಸಿತು. ಏನಾಯ್ತು ಎಂದು ಅವಳ ತಂದೆ ವಿಚಾರಿಸಿದಾಗ ಡ್ರೈವರ್ ಅಣ್ಣ ನನ್ನ ಒಳ ಉಡುಪುಗಳನ್ನು ತೆಗೆದು ಏನೇನೋ ಮಾಡಿದ. ಇದನ್ನೆಲ್ಲ ಯಾರಿಗಾದರೂ ಹೇಳಿದರೆ ನಿನಗೆ ಹೊಡೆಯುತ್ತೇನೆ ಎಂದು ಹೆದರಿಸಿದ ಎಂದು ಮುಗ್ಧವಾಗಿ ಹೇಳಿತು. ಆಕೆಯ ಹೇಳಿಕೆಯನ್ನು ವೀಡಿಯೋ ಚಿತ್ರೀಕರಿಸಿಕೊಂಡ ನಾವು ಆಕೆಯ ಶಿಕ್ಷಕಿ ಮತ್ತು ಶಾಲೆಯ ಪ್ರಾಚಾರ್ಯರನ್ನು ಸಂಪರ್ಕಿಸಿದೆವು. ಅವರು ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ, ಎಂದು ಮಗುವಿನ ತಾಯಿ ಹೇಳಿದ್ದಾಳೆ.

ಇದನ್ನೆಲ್ಲ ಹೇಳಲು ಆಕೆ ವಿಪರೀತ ಹೆದರುತ್ತಿದ್ದಳು. ಆತ ಥಳಿಸುತ್ತಾನೆ ಎಂಬ ಭಯ ಆಕೆಗಿತ್ತು ಎಂದು ಪೋಷಕರು ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾರೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ವರದಿಗಾಗಿ ಪೊಲೀಸರು ನಿರೀಕ್ಷಿಸುತ್ತಿದ್ದಾರೆ.

Comments are closed.