ರಾಷ್ಟ್ರೀಯ

ಶಬರಿಮಲೆ: ಸುಪ್ರೀಂ ಆದೇಶ ಜಾರಿಗೆ ಸರಕಾರದಿಂದ ಪ್ರತಿಭಟನಾಕಾರರ ಹತ್ತಿಕ್ಕುವ ಕೆಲಸ- ಅಮಿತ್ ಶಾ ಆಕ್ರೋಶ

Pinterest LinkedIn Tumblr


ಕಣ್ಣೂರು: ಶಬರಿಮಲೆಗೆ ಮಹಿಳೆಯರ ಪ್ರವೇಶ ನೀಡುವ ವಿಚಾರದಲ್ಲಿ ಪ್ರತಿಭಟನೆಗೆ ಅಂಕುಶ ಹಾಕುವ ಪ್ರಯತ್ನ ಮಾಡಿದರೆ, ಸಿಎಂ ಪಿಣರಾಯಿ ವಿಜಯನ್‌ ಅತ್ಯಂತ ದೊಡ್ಡ ಮೊತ್ತದ ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಎಚ್ಚರಿಸಿದ್ದಾರೆ.

ಶಬರಿಮಲೆ ಅಯ್ಯಪ್ಪ ಭಕ್ತರರ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿದ ಅವರು, ಸುಪ್ರೀಂ ಕೋರ್ಟ್‌ ಆದೇಶವನ್ನು ಜಾರಿಗೊಳಿಸಲು ಮುಂದಾಗಿರುವ ಸರಕಾರ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕೆಲಸ ಮಾಡಿದೆ ಎಂದು ಕೇರಳದ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನೆ ವೇಳೆ ಆರ್‌ಎಸ್‌ಎಸ್‌, ಸಂಘ ಪರಿವಾರದ ಸುಮಾರು 2 ಸಾವಿರ ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿರುವುದಕ್ಕೂ ಶಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ ಆದೇಶ ಪಾಲನೆಯ ಹೆಸರಲ್ಲಿ ಹಿಂಸೆಗೆ ದಾರಿ ಮಾಡಿಕೊಡುತ್ತಿರುವ ಸರಕಾರದ ಕ್ರಮ ಖಂಡನೀಯ. ಸರಕಾರದ ನಿರ್ಧಾರವನ್ನು ಇಲ್ಲಿನ ಅನೇಕ ಮಹಿಳೆಯರೇ ಖಂಡಿಸಿದ್ದಾರೆ ಎಂದರು.

ಎಡಪಂಥೀಯ ಸರಕಾರ ಶಬರಿಮಲೆ ದೇವಾಲಯವನ್ನು, ಹಿಂದು ಸಂಪ್ರದಾಯವನ್ನು ನಾಶಗೊಳಿಸಲು ಮುಂದಾಗಿದೆ. ಇದಕ್ಕೆ ಬಿಜೆಪಿ ಎಂದೂ ಅವಕಾಶ ನೀಡುವುದಿಲ್ಲ ಎಂದು ಶಾ ಹೇಳಿದರು.

ದೇಶದಲ್ಲಿರುವ ಬೇರೆ ಯಾವುದೇ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿಲ್ಲ. ಶಬರಿಮಲೆಯಲ್ಲಿ ನಡೆದು ಬಂದ ಸಂಪ್ರದಾಯ, ಆಚರಣೆಗೆ ಧಕ್ಕೆ ತರಲು ಸರಕಾರ ಮುಂದಾಗಿದೆ. ಕೇರಳದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದು ದೇವಾಲಯಗಳ ವಿರುದ್ಧ ಕಮ್ಯುನಿಸ್ಟ್‌ ಸರಕಾರ ಪಿತೂರಿ ನಡೆಸುತ್ತಿದೆ ಎಂದು ದೂರಿದರು.

ಕೇರಳ ಸರಕಾರ ಈ ಹಿಂದೆ ಕೋರ್ಟ್‌ನ ಅನೇಕ ಆದೇಶಗಳನ್ನು ಪಾಲಿಸಿಲ್ಲ. ಭಕ್ತರ ಭಾವನೆಗಳಿಗೆ ಧಕ್ಕೆಯಾಗಬಾರದು ಎಂದು ಅವರು ಹೇಳಿದರು.

ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಭಾಷಣ ಆರಂಭಿಸಿದ್ದ ಶಾ, ಕೇರಳದಲ್ಲಿ ಶಬರಿಮಲೆ ವಿಚಾರವನ್ನೇ ತಮ್ಮ ಪ್ರಮುಖ ಅಜೆಂಡಾವನ್ನಾಗಿಸಿ, ಸರಕಾರದ ನಡೆಯನ್ನು ಖಂಡಿಸಿದರು.

Comments are closed.