ರಾಷ್ಟ್ರೀಯ

ಶಬರಿಮಲೆಗೆ ಮಹಿಳೆಯರ ಪ್ರವೇಶ ಸ್ವಾಗತಿಸಿದ್ದ ಸ್ವಾಮಿ ಸಂದೀಪಾನಂದ ಗಿರಿ ಆಶ್ರಮದ ಮೇಲೆ ದುಷ್ಕರ್ಮಿಗಳಿಂದ ದಾಳಿ

Pinterest LinkedIn Tumblr

ತಿರುವನಂತಪುರ: 10-50 ವಯೋಮಾನದ ಎಲ್ಲಾ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದ ಕೇರಳದ ತಿರುವನಂತಪುರದ ಕುಂಡಮಕಡವುದಲ್ಲಿರುವ ಸ್ವಾಮಿ ಸಂದೀಪಾನಂದ ಗಿರಿಯವರ ಆಶ್ರಮದ ಮೇಲೆ ದುಷ್ಕರ್ಮಿಗಳ ತಂಡವೊಂದು ಶನಿವಾರ ದಾಳಿ ನಡೆಸಿದೆ.

ಆಶ್ರಮದ ಮೇಲೆ ಇಂದು ಬೆಳಿಗ್ಗೆ ದಾಳಿ ನಡೆಸಿರುವ ದುಷ್ಕರ್ಮಿಗಳು ಆಶ್ರಮಕ್ಕೆ ಸೇರಿದ ಎರಡು ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಬೆಂಕಿ ಹಚ್ಚಿದ ಪರಿಣಾಮ ಆಶ್ರಮದಲ್ಲಿ ದಟ್ಟ ಹೊಗೆ ಆವರಿಸಿದ ಹಿನ್ನಲೆಯಲ್ಲಿ ಆಶ್ರಮದಲ್ಲಿದ್ದ ಸೇವಕರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬೆಂಕಿ ನಂದಿಸಿದ್ದು, ವಾಹನಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.

ದುಷ್ಕರ್ಮಿಗಳ ದಾಳಿಯಿಂದಾಗಿ ಆಶ್ರಮದ ಸುತ್ತಮುತ್ತಲಿನ ಕಟ್ಟಡಗಳಿಗೂ ಹಾನಿಯುಂಟಾಗಿದೆ. ಘಟನೆ ವೇಳೆ ಗಿರಿಯವರು ಆಶ್ರಮದಲ್ಲಿರಲಿಲ್ಲ. ಆಶ್ರಮದಲ್ಲಿ ಕೇವಲ ಇಬ್ಬರು ಸೇವಕರು ಮಾತ್ರ ಇದ್ದರು ಎಂದು ವರದಿಗಳು ತಿಳಿಸಿವೆ.

ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಂದೀಪಾನಂದ ಅವರು, ದಾಳಿ ಹಿಂದೆ, ಬಿಜೆಪಿ ಸಂಘ ಪರಿವಾರ, ಪಂದಳಂ ರಾಜಮನೆತನದ ಕುಟುಂಬ, ತಂಝಾಮೋನ್ ತಂತ್ರಿ ಹಾಗೂ ಅಯ್ಯಪ್ಪ ಧರ್ಮಸೇನಾ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಇಂತಹ ದಾಳಿಗಳಿಗೆ ನಾನು ತಲೆ ಬಾಗುವುದಿಲ್ಲ. ಈ ರೀತಿ ಅವರು ಒಂದು ದಿನ ಬೆಂಕಿ ಹಚ್ಚಬಹುದು. ಆದರೆ, ನಾನು ಸತ್ಯವನ್ನು ಹೇಳುವುದನ್ನು ಹೀಗೆಯೇ ಮುಂದುವರೆಸುತ್ತೇನೆಂದು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಜಿಪಿ ಲೋಕನಾಥ್ ಬೆಹರಾ ಅವರು, ಘಟನೆ ಕುರಿತಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಇಂತಹ ಪ್ರಕರಣಗಳನ್ನು ಸಹಿಸುವುದಿಲ್ಲ ಎಂದಿದ್ದಾರೆ.

ಇನ್ನು ದಾಳಿ ಕುರಿತಂತೆ ತಮ್ಮ ಪಾತ್ರವಿದೆ ಎಂಬ ಆರೋಪವನ್ನು ಬಿಜೆಪಿ ಜಿಲ್ಲಾ ನಾಯಕತ್ವ ತಿರಸ್ಕರಿಸಿದ್ದು, ನ್ಯಾಯಯುತ ತನಿಖೆಗೆ ಆಗ್ರಹಿಸಿದೆ.

Comments are closed.