ರಾಷ್ಟ್ರೀಯ

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ನಿವಾಸದ ಮುಂದೆ ಇದ್ದವರು ನಮ್ಮ ಅಧಿಕಾರಿಗಳೇ, ಅವರು ಗೂಢಾಚಾರಿಕೆ ಮಾಡುತ್ತಿರಲಿಲ್ಲ: ಐಬಿ

Pinterest LinkedIn Tumblr

ನವದೆಹಲಿ: ಕಡ್ಡಾಯ ರಜೆಯಲ್ಲಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ನಿವಾಸದ ಮುಂದೆ ಇದ್ದವರು ನಮ್ಮ ಅಧಿಕಾರಿಗಳೇ, ಅವರು ಗೂಢಾಚಾರಿಕೆ ಮಾಡುತ್ತಿರಲಿಲ್ಲ ಗುಪ್ತಚರ ದಳ (ಐಬಿ)ದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಸಾರ್ವಜನಿಕ ಮತ್ತು ಆಂತರಿಕ ಭದ್ರತೆಗಳ ಮೇಲೆ ಪರಿಣಾಮ ಬೀರುವ ಯಾವುದೇ ಪರಿಸ್ಥಿತಿಗಳ ಕುರಿತಂತೆ ಮಾಹಿತಿಗಳನ್ನು ಕಲೆಹಾಕುವ ಜವಾಬ್ದಾರಿಯನ್ನು ಗುಪ್ತಚರ ಇಲಾಖೆ ನಾಲ್ವರು ಅಧಿಕಾರಿಗಳಿಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ನಾಲ್ವರು ಅಧಿಕಾರಿಗಳು ಅಲೋಕ್ ವರ್ಮಾ ಅವರ ನಿವಾಸದ ಮುಂದೆ ಬೀಡುಬಿಟ್ಟಿದ್ದರು ಎಂದು ಗುಪ್ತಚರ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಇದಲ್ಲದೆ, ಸಾಮಾನ್ಯವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿಗಳು ಮಾಹಿತಿಗಳನ್ನು ಕಲೆ ಹಾಕಲು ನಿಯೋಜಿಸಲಾಗಿರುತ್ತದೆ. ಕೆಲವೊಮ್ಮೆ ಸ್ಥಳೀಯ ಜಾರಿ ಸಂಸ್ಥೆಗಳೊಂದಿಗೆ ಸೇರಿಕೊಂಡು ಇಂತಹ ಕಾರ್ಯಗಳನ್ನು ಮಾಡಲಾಗುತ್ತಿರುತ್ತದೆ. ಕೆಲವೊಮ್ಮೆ ಆಶ್ಚರ್ಯಕರ ಸನ್ನಿವೇಶಗಳು ಸಹ ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಜಾರಿ ಸಂಸ್ಥೆಗಳೂ ಕೂಡಲೇ ಪ್ರತಿಕ್ರಿಯೆಗಳನ್ನು ನೀಡುತ್ತವೆ.

ಇಂತಹ ಕಾರ್ಯಾಚರಣೆ ಹಾಗೂ ಕರ್ತವ್ಯ ನಿಭಾಯಿಸುವ ಅಧಿಕಾರಿಗಳು ಗುರುತಿನ ಚೀಟಿಯನ್ನು ಹೊಂದಿರುತ್ತಾರೆ. ಇಂತಹ ಕಾರ್ಯಾಚರಣೆಗಳು ರಹಸ್ಯವಾಗಿರಲಿದ್ದು, ಗೌಪ್ಯವಾಗಿ ನಡೆಸಲಾಗುತ್ತಿರುತ್ತದೆ ಎಂದು ಐಬಿ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಿಗ್ಗೆಯಷ್ಟೇ ಅಲೋಕ್ ವರ್ಮಾ ಅವರ ನಿವಾಸದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆಂದು ಶಂಕಿಸಿ ನಾಲ್ವರನ್ನು ಅಲೋಕ್ ಅವರ ಭದ್ರತಾ ಸಿಬ್ಬಂದಿಗಳು ಬಂಧನಕ್ಕೊಳಪಡಿಸಿದ್ದರು.

ಅಲೋಕ್ ವರ್ಮಾ ನಂತರದ ಹಿರಿಯ ಅಧಿಕಾರಿಯಾಗಿರುವ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಬಿಐ ಇದೇ 15 ರಂದು ಎಫ್ಐಆರ್ ದಾಖಲಿಸಿತ್ತು. ಬಳಿಕ ಅಸ್ಥಾನಾ ಮತ್ತು ಅಲೋಕ್ ವರ್ಮಾ ಅವರ ನಡುವೆ ಶೀತರ ಸಮರ ಬಯಲಾಗಿತ್ತು. ಇಬ್ಬರೂ ಪರಸ್ಪರರ ವಿರುದ್ಧ ಆರೋಪ ಮಾಡಿಕೊಂಡು ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತೆ ಮಾಡಿದ್ದರು.

ಈ ಒಳಜಗಳವನ್ನು ಸರಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಮಧ್ಯೆಪ್ರವೇಶಿಸಿ ಅಲೋಕ್ ವರ್ಮಾ ಹಾಗೂ ಅಸ್ಥಾನಾ ಅವರಿಗೆ ಕಡ್ಡಾಯ ರಜೆ ಮೇಲೆ ಕಳುಹಿಸಿತ್ತು.

Comments are closed.