ರಾಷ್ಟ್ರೀಯ

ಕೇವಲ 1 ರೂ. ಶುಲ್ಕ ಪಡೆದು ಮದುವೆ ನಡೆಸಿಕೊಡುವ ಸಂಸ್ಥೆ!

Pinterest LinkedIn Tumblr


ಚೆನ್ನೈ: ಮದುವೆ ಸಮಾರಂಭ ದುಬಾರಿಯಾಗುತ್ತಿರುವ ದಿನಗಳಲ್ಲಿ ಚೆನ್ನೈನ ವೆಡ್ಡಿಂಗ್ ಆರ್ಗನೈಸರ್ಸ್‌ ಸಂಸ್ಥೆಯೊಂದು ಕೇವಲ 1 ರೂ. ಶುಲ್ಕ ಪಡೆದುಕೊಂಡು ಬಡ ಜೋಡಿಗಳ ಮದುವೆ ನಡೆಸಲು ಮುಂದಾಗಿದೆ.

ದಿ ಗ್ರ್ಯಾಂಡ್ ವೆಡ್ಡಿಂಗ್ ಹೆಸರಿನ ವಿವಾಹ ಆಯೋಜಕ ಸಂಸ್ಥೆಯ ಸಿಇಒ ಶರತ್ ಈ ಯೋಜನೆಗೆ ಮುಂದಾಗಿದ್ದಾರೆ. ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅವರು ಬಡ ಜೋಡಿಗಳಿಗೆ ಕೆಲವೊಂದು ಷರತ್ತುಗಳನ್ನ ವಿಧಿಸಿದ್ದಾರೆ.

ಜೋಡಿಗಳ ಪೈಕಿ ಇಬ್ಬರೂ ಬಡವರಾಗಿರಬೇಕು. ಒಬ್ಬರಾದರೂ 5,000 ರೂ.ನಿಂದ 10,000 ರೂ.ವರೆಗೆ ವೇತನ ದೊರೆಯುವ ಉದ್ಯೋಗ ಹೊಂದಿರಬೇಕು. ಉದ್ಯೋಗ ಹೊಂದಿದ್ದರೆ ಮುಂದೆ ಅವರ ಜೀವನಕ್ಕೆ ತೊಂದರೆಯಾಗದು ಎಂಬ ಉದ್ದೇಶದಿಂದ ಈ ಷರತ್ತು ವಿಧಿಸಲಾಗಿದೆ.

ಅರ್ಜಿ ಸಲ್ಲಿಸಿದವರ ಕುಟುಂಬದ ಹಿನ್ನೆಲೆ, ಅರ್ಹತೆಯನ್ನು ಪರಿಶೀಲಿಸಿ ನಂತರ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಎರಡೂ ಮನೆಯವರ ಒಪ್ಪಿಗೆ ಅಗತ್ಯವಾಗಿದೆ. ನಂತರ ಅವರ ಮದುವೆ ಮಾಡಿಸಲಾಗುತ್ತದೆ. ಈವರೆಗೆ 25 ಅರ್ಜಿಗಳು ಬಂದಿವೆ ಎಂದು ಶರತ್ ತಿಳಿಸಿದ್ದಾರೆ.

ಪ್ರತಿ ತಿಂಗಳಿಗೆ ಒಂದರಂತೆ ಡಿಸೆಂಬರ್‌ನಿಂದ ಮದುವೆ ಮಾಡಿಸಲಾಗುತ್ತದೆ. ವಧು-ವರನಿಗೆ ಮದುವೆ ಉಡುಪು, ಫೋಟೋಗ್ರಫಿ, ವಿಡಿಯೋಗ್ರಫಿ, ದಿಬ್ಬಣದ ಕಾರು, ಎರಡೂ ಕುಟುಂಬದ 100 ಮಂದಿಗೆ ಬೆಳಗಿನ ಉಪಹಾರ ಒದಗಿಸಿ, ಹಳೇ ಮಹಾಬಲಿಪುರಂ ರಸ್ತೆಯ ವೆಡ್ಡಿಂಗ್ ಸ್ಟ್ರೀಟ್‌ನಲ್ಲಿ ಮದುವೆ ನಡೆಸಲಾಗುತ್ತದೆ.

ಮೂಲ ವರದಿ: ಸಮಯಂ ತಮಿಳು

Comments are closed.