ರಾಷ್ಟ್ರೀಯ

50ಕ್ಕೂ ಹೆಚ್ಚು ಜನರ ಸಾವು ಸಂಭವಿಸಿದ ಅಮೃತಸರ ದಸರಾ ರೈಲು ದುರಂತಕ್ಕೆ ಕಾರಣವಾದ ಕಾಂಗ್ರೆಸ್‌!

Pinterest LinkedIn Tumblr


ಅಮೃತಸರ: ಪಂಜಾಬ್‌ನ ಅಮೃತಸರದಲ್ಲಿ ಶುಕ್ರವಾರ ಸಂಜೆ 60ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ರೈಲು ದುರಂತಕ್ಕೆ ಕಾಂಗ್ರೆಸ್‌ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಅನುಮತಿಯನ್ನೇ ಪಡೆಯದೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಮಧ್ಯೆ, ಜೋದಾ ಫಾಟಕ್‌ನಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪಂಜಾಬ್‌ ಸಚಿವ ನವಜೋತ್‌ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರು, ದುರಂತದ ಬಳಿಕ ಗಾಯಾಳುಗಳಿಗೆ ನೆರವಾಗುವುದು ಬಿಟ್ಟು, ಸ್ಥಳದಿಂದ ಕಾಲು ಕಿತ್ತರು ಎಂದು ಹಲವು ಪ್ರತ್ಯಕ್ಷದರ್ಶಿಗಳು ಗಂಭೀರ ಆಪಾದನೆ ಮಾಡಿದ್ದಾರೆ.

ದುರಂತ ನಡೆದರೂ ನಿಲ್ಲದ ಭಾಷಣ: ಪ್ರತಿಕೃತಿ ದಹನದ ಬಳಿಕ, ಕೌರ್‌ ಅವರು ಭಾಷಣ ಮಾಡುತ್ತಿದ್ದರು. ಜನರು ಎಲ್‌ಇಡಿ ಪರದೆಗಳ ಮೂಲಕ ಭಾಷಣ ವೀಕ್ಷಿಸುತ್ತಿದ್ದರು. ಈ ಸಂದರ್ಭ ಪ್ರತಿಕೃತಿ ಬಳಿ ಇದ್ದ ಕೆಲವರು ಬೆಂಕಿ ಭೀತಿಯಿಂದ ದೂರ ಸರಿದು, ಗುಂಪು ಗುಂಪಾಗಿ ರೈಲ್ವೆ ಹಳಿಯತ್ತ ಸಾಗಿದರು. ಅಷ್ಟರಲ್ಲಿ ವೇಗವಾಗಿ ಬಂದ ರೈಲು ಹಳಿಯ ಮೇಲೆ ನಿಂತಿದ್ದವರ ಮೇಲೆ ಹರಿಯಿತು. ಆದರೆ, ದುರಂತ ನಡೆದರೂ ಕೌರ್‌ ಭಾಷಣ ಮುಂದುವರಿಸಿದ್ದರು. ಘಟನೆ ಬಗ್ಗೆ ತಿಳಿದ ಬಳಿಕ ನೆರವಿಗೆ ಧಾವಿಸುವುದು ಬಿಟ್ಟು ಸ್ಥಳದಿಂದ ತರಾತುರಿಯಲ್ಲಿ ನಿರ್ಗಮಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಕೌರ್‌ ತಿರುಗೇಟು: ಆದರೆ, ಆರೋಪ ನಿರಾಕರಿಸಿರುವ ಕೌರ್‌, ಘಟನೆ ನಡೆಯುವ ಮುನ್ನವೆ ತಾವು ಸ್ಥಳದಿಂದ ನಿರ್ಗಮಿಸಿದ್ದಾಗಿ ಹೇಳಿದ್ದಾರೆ.

ರೈಲಿನ ಹಳಿಯ ಮೇಲೆ ನಿಂತು ಜನರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಆದರೆ, ದುರಂತ ಸಂಭವಿಸುವಾಗ ನಾನು ಅಲ್ಲಿರಲಿಲ್ಲ ಎಂದಿದ್ದಾರೆ.
ಅಲ್ಲದೆ, ಘಟನೆಯಲ್ಲಿ ಬೆನ್ನಲ್ಲೇ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ.

ಆಯೋಜಕರ ವೈಫಲ್ಯ: ಕಾರ್ಯಕ್ರಮ ಆಯೋಜಕರು ರೈಲು ಹತ್ತಿರ ಬಂದಾಗ ಎಚ್ಚರಿಕೆ ಗಂಟೆ ಮೊಳಗಿಸುವ ವ್ಯವಸ್ಥೆ ಮಾಡಬೇಕಿತ್ತು. ರೈಲ್ವೆ ಇಲಾಖೆಗೆ ಮೊದಲೇ ತಿಳಿಸಿ ಕಾರ್ಯಕ್ರಮದ ಸ್ಥಳದ ಬಳಿಗೆ ಬಂದಾಗ ರೈಲು ನಿಧಾನವಾಗಿ ಚಲಿಸುವಂತೆ ಅಥವಾ ನಿಂತು ಚಲಿಸುವಂತೆ ವ್ಯವಸ್ಥೆ ಮಾಡಬೇಕಿತ್ತು. ಆದರೆ ಇದ್ಯಾವುದನ್ನೂ ಮಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸಿಎಂ ಭೇಟಿ: ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸೋಮವಾರ ಬೆಳಗ್ಗೆ 7 ಗಂಟೆಗೆ ಘಟನಾ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಲಿದ್ದಾರೆ. ತಾವು ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಯಲ್ಲೇ ದುರಂತ ನಡೆದಿರುವುದರಿಂದ ತಮ್ಮ ದುಃಖ ಇಮ್ಮಡಿಸಿದೆ ಎಂದು ಸಿಎಂ ಹೇಳಿದ್ದಾರೆ.

ತನಿಖೆಗೆ ಆದೇಶ: ಪಂಜಾಬ್‌ ಸರಕಾರ ಅಪಘಾತದ ತನಿಖೆಗೆ ಆದೇಶ ನೀಡಿದೆ. ಇದಲ್ಲದೆ, ರೈಲ್ವೆ ಇಲಾಖೆಯೂ ಪ್ರತ್ಯೇಕವಾಗಿ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಸಾವು ತಪ್ಪಿಸಲು ಹೋಗಿ ಬಲಿಯಾದರು:
ಎರಡು ಹಳಿಗಳ ಮೇಲೆ ಎರಡೂ ದಿಕ್ಕಿನಿಂದ ಒಂದೆ ಬಾರಿ ರೈಲುಗಳು ಬರುತ್ತಿದ್ದವು. ಜನರು ಒಂದು ರೈಲನ್ನು ಮಾತ್ರ ಗಮನಿಸಿ ಮತ್ತೊಂದು ಹಳಿಯತ್ತ ಸಾಗಿದರು. ಅಷ್ಟರಲ್ಲಿ ಅತ್ತಲಿಂದಲೂ ವೇಗವಾಗಿ ಬಂದ ಮತ್ತೊಂದು ರೈಲು ಜನರನ್ನು ಹೊಸಕಿಹಾಕಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪಂಜಾಬ್ ರೈಲು ದುರಂತ: ಸಿ ಎಂ ಸಂತಾಪ
ಇಂದು ಪಂಜಾಬ್ ನಲ್ಲಿ ರಾವಣ ಪ್ರತಿಕೃತಿ ದಹನದ ವೇಳೆ ಜರುಗಿದ ಘೋರ ರೈಲು ದುರಂತಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸಂಭ್ರಮ ಆಚರಣೆಯಲ್ಲಿದ್ದ ಜನರ ಮೇಲೆ ರೈಲು ಹರಿದ ಪರಿಣಾಮ ಹಲವಾರು ಮಂದಿ ಸಾವಿಗೀಡಾಗಿದ್ದರೆ. ಇದು ನನಗೆ ತೀವ್ರ ಆಘಾತವನ್ನುಂಟುಮಾಡಿದೆ. ಈ ಘಟನೆಯಿಂದ ನಾನು ನೊಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಈ ದುರಂತದಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ನನ್ನ ಸಂತಾಪಗಳು ಹಾಗೂ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಸಾವಿಗೀಡಾದವರ ಕುಟುಂಬಕ್ಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

Comments are closed.