ರಾಷ್ಟ್ರೀಯ

#MeToo: ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೇಂದ್ರ ಸಚಿವ

Pinterest LinkedIn Tumblr

ನವದೆಹಲಿ: ‘ಮಿ ಟೂ’ ಅಭಿಯಾನದಲ್ಲಿ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ಅವರ ವಿರುದ್ಧ ಮಾಜಿ ಸಂಪಾದಕ ಹಾಗೂ ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ಅವರು ಸೋಮವಾರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಪ್ರಿಯಾ ರಮಣಿ ಅವರು ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ಮತ್ತು ಮಾನಹಾನಿ ಮಾಡುವ ದುರುದ್ದೇಶದಿಂದ ಆರೋಪ ಮಾಡಿದ್ದು, ಮಾನನಷ್ಟ ಪ್ರಕರಣದಡಿ ಅವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್ ಅವರು ಇಂದು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.

ಭಾರತದಲ್ಲಿ ಲೈಂಗಿಕ ಕಿರುಕುಳದ ವಿರುದ್ಧ #MeToo ಅಭಿಯಾನ ತೀವ್ರಗೊಳ್ಳುತ್ತಿದ್ದಂತೆ ಕೇಂದ್ರ ಸಚಿವ, ಏಷ್ಯನ್ ಏಜ್ ಮಾಜಿ ಸಂಪಾದಕ ಅಕ್ಬರ್ ವಿರುದ್ಧ 12 ಪತ್ರಕರ್ತೆಯರು ಆರೋಪ ಮಾಡಿದ್ದರು.

ಲೈಂಗಿಕ ಕಿರುಕುಳ ಆರೋಪಗಳ ಹಿನ್ನೆಲೆಯಲ್ಲಿ ಅಕ್ಬರ್ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಡ ಹೇರಿತ್ತು. ಆದರೆ ರಾಜೀನಾಮೆಯ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದ ಅಕ್ಬರ್ ಅವರು, ಎಲ್ಲ ಆರೋಪಗಳನ್ನು ಪರಿಶೀಲಿಸಿ ತಮ್ಮ ವಕೀಲರು ಸೂಕ್ತ ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದು ನಿನ್ನೆ ಹೇಳಿದ್ದರು.

ಪತ್ರಕರ್ತೆ ಪ್ರಿಯಾ ರಮಣಿ ಅವರು ಅಕ್ಬರ್ ವಿರುದ್ಧ ಅಕ್ಟೋಬರ್ 8ರಂದು ಮೊದಲ ಆರೋಪ ಮಾಡಿದ್ದರು. ಬಳಿಕ ಪ್ರೇರಣಾ ಸಿಂಗ್ ಬಿಂದ್ರಾ, ಘಜಾಲಾ ವಹಾಬ್, ಶತುಪಾ ಪಾಲ್ ಹಾಗೂ ಅಂಜು ಭಾರ್ತಿ ಸೇರಿದಂತೆ 12 ಮಹಿಳೆಯರು ಆರೋಪ ಮಾಡಿದ್ದರು.

Comments are closed.