ರಾಷ್ಟ್ರೀಯ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷವನ್ನೂ ಬೆಂಬಲಿಸಲ್ಲ: ರಾಮ್‌ದೇವ್

Pinterest LinkedIn Tumblr

ನವದೆಹಲಿ: ಈ ಹಿಂದೆ ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದ ಯೋಗಗುರು ಬಾಬಾ ರಾಮ್‌ದೇವ್‌ ಅವರು 2019ರ ಲೋಕಸಭೆ ಚುನಾವಣೆ ವೇಳೆ ನಾನು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ, ರಾಜಕೀಯದಲ್ಲಿ ತನ್ನ ಪಾತ್ರ ಏನೆಂಬುದನ್ನು ತಿಳಿಸಿರುವ ಅವರು, ಈ ದೇಶ ಉತ್ತಮ ಜನರಿಂದ ಆಳಲ್ಪಡುತ್ತಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದೇ ತನ್ನ ಗುರಿ ಎಂದು ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ದೇಶದ ದೊಡ್ಡ ಸಮಸ್ಯೆಗಳಾದ ರಾಷ್ಟ್ರ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣ, ಶಿಕ್ಷಣ, ಕೃಷಿ ಮತ್ತು ಆರೋಗ್ಯ ಸೇರಿ ಇತರೆ ದೊಡ್ಡ ಸಮಸ್ಯೆಗಳತ್ತ ನನ್ನನ್ನು ನಾನು ಅರ್ಪಿಸಿಕೊಳ್ಳುತ್ತೇನೆ. ನನ್ನನ್ನು ನಾನು ಭಾರತ ಮಾತೆಯ ಸೇವೆ ಮಾಡುವ ಸ್ವತಂತ್ರ ಹಾಗೂ ರಾಜಕೀಯೇತರ ವ್ಯಕ್ತಿಯಾಗಿ ನೋಡಬಯಸುತ್ತೇನೆ ಎಂದು ಹೇಳಿದ್ದಾರೆ.

ರಾಷ್ಟ್ರ ಮೊದಲು ಎಂಬ ತತ್ತ್ವದೊಂದಿಗೆ ನಾನು ಕೆಲಸ ಮಾಡುತ್ತೇನೆ. ಆದ್ದರಿಂದ ದೇಶವು ಉತ್ತಮ ಜನರಿಂದ ಆಳಲ್ಪಡುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಷ್ಟೇ ನನ್ನ ರಾಜಕೀಯ ಪಾತ್ರ ಸೀಮಿತವಾಗಿರುತ್ತದೆ ಎಂದಿದ್ದಾರೆ.

ಎಫ್‌ಐಸಿಸಿಐ ಮಹಿಳಾ ಸಂಘಟನೆಯು ಆಯೋಜಿಸಿದ್ದ ಮಹಿಳಾ ಉದ್ಯಮ ವಿಭಾಗದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷದ ಪರವಾಗಿಯೂ ನಾನು ಪ್ರಚಾರ ಕಾರ್ಯ ಕೈಗೊಳ್ಳುವುದಿಲ್ಲ. ಬದಲಿಗೆ ತಟಸ್ಥವಾಗಿರುತ್ತೇನೆ ಎಂದು ತಿಳಿಸಿದ್ದಾರೆ.

ಕಳೆದ ಜೂನ್‌ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ಅವರು ಬಾಬಾ ರಾಮ್‌ದೇವ್‌ ಅವರನ್ನು ಭೇಟಿ ಮಾಡಿ ಮುಂಬರುವ 2019ರ ಲೋಕಸಭಾ ಚುನಾವಣೆಗೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದರು.

ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಹಲವು ಸಾಧನೆಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. 2014ರಿಂದಲೂ ಬಿಜೆಪಿ ಪರವಾಗಿ ಹಲವಾರು ಚುನಾವಣೆಗಳಲ್ಲಿ ಪ್ರಚಾರ ಕಾರ್ಯಕೈಗೊಂಡಿದ್ದರು.

Comments are closed.