ನವದೆಹಲಿ: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧ್ಯಾ ಅವರು ತಮ್ಮ ರಾಜ್ಯದ ರೈತರಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸುವ ಮೂಲಕ ಬಂಪರ್ ಕೊಡುಗೆ ನೀಡಿದ್ದಾರೆ. ಆದರೆ, ಬಿಜೆಪಿ ಆಡಳಿತದ ಸರಕಾರ ಈ ಕೊಡುಗೆ ಘೋಷಿಸುವ ಸಂದರ್ಭವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಚುನಾವಣಾ ಆಯೋಗವು ಪಂಚ ರಾಜ್ಯಗಳ ಚುನಾವಣೆಯ ದಿನಾಂಕಗಳನ್ನ ಘೋಷಿಸುವ ಅರ್ಧ ಗಂಟೆ ಮುಂಚೆ ವಸುಂಧರಾ ಅವರು ಉಚಿತ ವಿದ್ಯುತ್ನ ಕೊಡುಗೆ ಘೋಷಿಸಿದ್ದಾರೆ. ವಾಸ್ತವವಾಗಿ ಚುನಾವಣಾ ಆಯೋಗವು ಮಧ್ಯಾಹ್ನ 12:30ಕ್ಕೆ ಪತ್ರಿಕಾಗೋಷ್ಠಿ ಕರೆದು ದಿನಾಂಕ ಘೋಷಿಸಬೇಕೆಂದು ಪೂರ್ವನಿಗದಿಯಾಗಿತ್ತು. ಅಚಾನಕ್ಕಾಗಿ ಮಧ್ಯಾಹ್ನ 3:30ಕ್ಕೆ ಪತ್ರಿಕಾಗೋಷ್ಠಿಯನ್ನು ಮುಂದೂಡಿಕೆ ಮಾಡಲಾಯಿತು. ಈ ಬೆಳವಣಿಗೆ ಆದ ಬೆನ್ನಲ್ಲೇ ಮಧ್ಯಾಹ್ನ 3ಗಂಟೆಗೆ ರಾಜಸ್ಥಾನ ಮುಖ್ಯಮಂತ್ರಿಯು ರೈತರಿಗೆ ಉಚಿತ ವಿದ್ಯುತ್ ಕೊಡುವುದಾಗಿ ಪ್ರಕಟಿಸುತ್ತಾರೆ. ರಾಜಸ್ಥಾನದ ಅಜ್ಮೇರ್ ನಗರದಲ್ಲಿ ಮಧ್ಯಾಹ್ನ 1ಗಂಟೆಗೆ ನರೇಂದ್ರ ಮೋದಿ ಅವರ ಭಾಷಣವೂ ನಡೆದಿತ್ತು.
ಒಂದು ವೇಳೆ, ಚುನಾವಣೆ ಆಯೋಗವು ಪೂರ್ವನಿಗದಿಯಂತೆ ಮಧ್ಯಾಹ್ನ 12:30ಕ್ಕೆ ಪತ್ರಿಕಾಗೋಷ್ಠಿ ನಡೆಸಿ ಚುನಾವಣಾ ದಿನಾಂಕವನ್ನು ಘೋಷಿಸಿದ್ದರೆ, ತತ್ಕ್ಷಣವೇ ನೀತಿ ಸಂಹಿತೆ ಜಾರಿಯಲ್ಲಿರುತ್ತಿತ್ತು. ರಾಜಸ್ಥಾನ ಮುಖ್ಯಮಂತ್ರಿಗಳು ಯಾವುದೇ ಘೋಷಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿಯೇ ಚುನಾವಣಾ ಆಯೋಗವು ತನ್ನ ಪತ್ರಿಕಾಗೋಷ್ಠಿಯನ್ನು ಮುಂದೂಡಿತಾ ಎಂಬ ಅನುಮಾನವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ.
ಸಿಬಿಐ, ಇಡಿ, ಎಲೆಕ್ಷನ್ ಕಮಿಷನ್ ಮೊದಲಾದ ಸರಕಾರಿ ಸಂಸ್ಥೆಗಳು ಕೇಂದ್ರ ಮತ್ತು ಬಿಜೆಪಿಯ ಅಣತಿಯಂತೆ ಕಾರ್ಯನಿರ್ವಹಿಸುತ್ತವೆ ಎಂಬುದು ಕಾಂಗ್ರೆಸ್ ಮಾಡುತ್ತಾ ಬಂದಿರುವ ಆರೋಪವಾಗಿದೆ. ಇವತ್ತಿನ ಚುನಾವಣೆ ಆಯೋಗದ ನಡವಳಿಕೆಯು ಈ ಆರೋಪವನ್ನು ಬಲಗೊಳಿಸುವಂತಿದೆ. ಬಿಜೆಪಿ ನಾಯಕರ ಸೂಚನೆ ಮೇರೆಗೆ ಚುನಾವಣಾ ಆಯೋಗವು ದಿನಾಂಕ ಘೋಷಣೆಯ ಸಮಯವನ್ನು ಮುಂದೂಡಿಕೆ ಮಾಡಿತು ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಈ ಹಿಂದಿನ ಕೆಲ ಬೆಳವಣಿಗೆಗಳನ್ನ ಸಾಕ್ಷಿಯಾಗಿ ಉಲ್ಲೇಖಿಸಿ ಟ್ವೀಟ್ ಮಾಡಿದ್ಧಾರೆ.
1) ಕರ್ನಾಟಕ ಚುನಾವಣೆಯ ವಿಚಾರದಲ್ಲಿ ಆಯೋಗದ ಪ್ರಕಟಣೆಗೂ ಮೊದಲು ಬಿಜೆಪಿ ಐಟಿ ವಿಭಾಗದವರು ದಿನಾಂಕವನ್ನು ಟ್ವೀಟ್ ಮಾಡಿತ್ತು.
2) ಪ್ರಧಾನಿ ಮೋದಿ ಅವರು ಕೆಲ ಘೋಷಣೆ ಮಾಡಲು ಅನುವಾಗುವಂತೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆಗಳನ್ನು ಚು. ಆಯೋಗವು ಪ್ರತ್ಯೇಕಗೊಳಿಸಿತ್ತು.
3) ರಾಜಸ್ಥಾನದಲ್ಲೂ ಪ್ರಧಾನಿ ಮೋದಿ ಅವರು ಬಂಪರ್ ಕೊಡುಗೆ ಘೋಷಿಸಲು ಸಾಧ್ಯವಾಗುವಂತೆ ಪತ್ರಿಕಾಗೋಷ್ಠಿಯನ್ನು ಚು. ಆಯೋಗ ಮುಂದೂಡಿತು.
ಈ ಮೂರು ವಿಚಾರಗಳನ್ನ ಪ್ರಸ್ತಾಪಿಸಿರುವ ಕಾಂಗ್ರೆಸ್ ವಕ್ತಾರರು, ಬಿಜೆಪಿಯು ಸೂಪರ್ ಎಲೆಕ್ಷನ್ ಕಮಿಷನ್ನಾ ಎಂದು ಪ್ರಶ್ನಿಸಿದ್ದಾರೆ.
ಸಚಿನ್ ಪೈಲಟ್ ಆಕ್ರೋಶ?
ಚುನಾವಣಾ ದಿನಾಂಕ ಪ್ರಕಟಣೆಗೆ ಅರ್ಧಗಂಟೆಗೆ ಮೊದಲು ಉಚಿತ ವಿದ್ಯುತ್ ಘೋಷಣೆ ಮಾಡುವ ಔಚಿತ್ಯವೇನಿತ್ತು? ಐದು ವರ್ಷಗಳ ಕಾಲ ಇದು ಅವರ ನೆನಪಿಗೆ ಬರಲಿಲ್ಲವಾ? ಬಿಜೆಪಿ ಎಷ್ಟು ಹತಾಶೆಯಲ್ಲಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಟೀಕಿಸಿದ್ದಾರೆ.
Comments are closed.