ರಾಷ್ಟ್ರೀಯ

ಅಮ್ಮ ಬಿಸ್ಕೆಟ್‌ ಕೊಡಿಸದಕ್ಕೆ 11ರ ಪುತ್ರ ಆತ್ಮಹತ್ಯೆಗೆ ಶರಣು!

Pinterest LinkedIn Tumblr


ಷಹಜಹಾನ್‌ಪುರ್: ಕೇವಲ ಎರಡು ರೂಪಾಯಿ ಬೆಲೆಯ ಬಿಸ್ಕೆಟ್ ಕೊಡಿಸಲು ಕೂಡ ತಾಯಿ ನಿರಾಕರಿಸಿದಳೆಂಬ ಕ್ಷುಲ್ಲಕ ಕಾರಣಕ್ಕೆ 11 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ಷಹಜಹಾನ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.

4ನೇ ತರಗತಿ ವಿದ್ಯಾರ್ಥಿ ಚಂದ್ರಬಾನ್ ಎಂಬ ಬಾಲಕ ತಾಯಿಯ ವೇಲ್‌ನಿಂದಲೇ ಮರಕ್ಕೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾನೆ. ಇಂಥಹ ಕ್ಷುಲ್ಲಕ ಕಾರಣದಿಂದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆಂಬ ಸುದ್ದಿಯನ್ನು ಪೊಲೀಸರು ಸೇರಿದಂತೆ ಯಾರು ಕೂಡ ನಂಬಿರಲಿಲ್ಲ. ಆದರೆ, ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆತ ನೇಣು ಬಿಗಿದುಕೊಂಡೇ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಜಲಹಾಬಾದ್‌ ಠಾಣಾ ವ್ಯಾಪ್ತಿಯ ಜಹಾರ್ಹರ್ ಹರಿಪುರ್ ಗ್ರಾಮದ ನಿವಾಸಿ ರಾಜೇಂದ್ರ ಕುಮಾರ್ ಹಾಗೂ ಸುಖಿ ದಂಪತಿಯ ಮೂರು ಮಕ್ಕಳ ಪೈಕಿ ಹಿರಿಯವನಾಗಿದ್ದ ಚಂದ್ರಭಾನ್, ಮಂಗಳವಾರ ಶಾಲೆಗೆ ಹೋಗುವ ಮುನ್ನ ಒಂದು ಕಪ್ ಟೀ ಹಾಗೂ ಬಿಸ್ಕೆಟ್‌ ಕೊಡು ವಂತೆ ತಾಯಿ ಬಳಿ ಕೇಳಿದ್ದ. ಆದರೆ, ತಾಯಿ ಟೀ ಮಾತ್ರ ನೀಡಿದ್ದು, ಮನೆಯಲ್ಲಿ ಬಿಸ್ಕೆಟ್‌ ಇಲ್ಲ ಎಂದು ತಿಳಿ ಹೇಳಿದ್ದಳು. ಕನಿಷ್ಠ ಪಕ್ಷ ಬಿಸ್ಕೆಟ್‌ ತಿನ್ನಲು 2 ರೂಪಾಯಿ ಆದರೂ ನೀಡು ಎಂದು ಬಾಲಕ ಅಂಗಲಾಚಿದಾಗ ತಾಯಿ ನಿರಾಕರಿಸಿದ್ದಳು ಎಂದು ಹೇಳಲಾಗುತ್ತಿದೆ.

ಇದರಿಂದ ಕುಪಿತನಾದ ಬಾಲಕ ಚಂದ್ರಬಾನ್, ಸಹೋದರಿಯ ಜತೆಯೂ ಜಗಳವಾಡಿ ತಾಯಿಯನ್ನು ಬಾಯಿಗೆ ಬಂದಂತೆ ಬೈದು ಆಕೆಯ ವೇಲ್ ತೆಗೆದುಕೊಂಡು ಹೊರನಡೆದಿದ್ದಾನೆ. ಎಷ್ಟೇ ಸಮಯವಾದರೂ ಬಾಲಕ ಮನೆಗೆ ವಾಪಸ್ಸಾಗಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ತನ್ನ ಅಜ್ಜ ಸಾಧುರಾಮ್ ನೆಟ್ಟಿದ್ದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಾಲಕ ಮರದಲ್ಲಿ ನೇತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಪೊಲೀಸ್ ಠಾಣೆಗೆ ಹಾಗೂ ಬಾಲಕನ ಮನೆಗೆ ಮಾಹಿತಿ ಮುಟ್ಟಿಸಿದ್ದಾರೆ.

‘ನನ್ನ ಮಗನಿಗೆ ಹಠಾತ್ ಸಿಟ್ಟಿನ ಪ್ರವೃತ್ತಿಯ ಸ್ವಭಾವವಿತ್ತು. ಆದರೆ, ಆತ ದುಡುಕಿ ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ. ಪುತ್ರನ ಅಗಲಿಕೆಯಿಂದ ಆಘಾತಕ್ಕೊಳಗಾಗಿದ್ದೇವೆ’ ಎಂದು ತಂದೆ ರಾಜೇಂದ್ರ ಅಳಲು ತೊಡಿಕೊಂಡಿದ್ದಾರೆ.

ಮದ್ನಾಪುರ್ ಹಾಗೂ ಜಲಾಲಾಬಾದ್ ಠಾಣಾ ವ್ಯಾಪ್ತಿಯಲ್ಲಿರುವ ಮರದಲ್ಲಿ ಬಾಲಕ ಚಂದ್ರಭಾನ್ ಶವ ನೇತಾಡುತ್ತಿತ್ತು. ಬಿಸ್ಕತ್ ತಿನ್ನಲು ತಾಯಿ 2 ರೂಪಾಯಿ ನೀಡಲಿಲ್ಲ ಎಂದು ಬಾಲಕ ಮನನೊಂದು ಈ ನಿರ್ಧಾರ ಕೈಕೊಂಡಿದ್ದಾನೆಂದು ಆತನ ಪೋಷಕರೇ ತಿಳಿಸಿದ್ದಾರೆ. ಆದರೆ, ಇಂತಹ ಕ್ಷುಲ್ಲಕ ಕಾರಣಕ್ಕೆ ಬಾಲಕ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆಂಬ ಸಂಗತಿ ನಂಬಲು ಕೂಡ ಸಾಧ್ಯವಾಗುತ್ತಿಲ್ಲ. ಆದರೆ, ಬಾಲಕ ನೇಣು ಬಿಗಿದುಕೊಂಡೇ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸುತ್ತಿದೆ ಎಂದು ಮದ್ನಾಪುರ್ ಪೊಲೀಸ್ ಠಾಣೆಯ ಅಧಿಕಾರಿ ಇಶ್ತಿಯಾಕ್ ಅಹ್ಮದ್ ತಿಳಿಸಿದ್ದಾರೆ.

Comments are closed.