ರಾಷ್ಟ್ರೀಯ

2 ದಿನದ ಹಿಂದೆ ಕಂದಕಕ್ಕೆ ಉರುಳಿಬಿದ್ದ ಕಾರು, ಜೀವಹಿಡಿದೇ ಇದ್ದ ಇಬ್ಬರು

Pinterest LinkedIn Tumblr


ಊಟಿ: ಪ್ರಕೃತಿ ಸೌಂದರ್ಯವನ್ನು ಸವಿಯಲು ಹೋದ ಸ್ನೇಹಿತರ ತಂಡವೊಂದರ ದುರಂತ ಕಥೆ ಇದು. ಹೋಟೆಲ್‌ನಿಂದ ಹೊರಟ ತಂಡ ಎರಡು ದಿನಗಳಾದರೂ ಮರಳಿ ಬಾರದ ಕಾರಣ ಹೋಟೆಲ್ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಪೊಲೀಸರು ಹುಡುಕಾಟ ನಡೆಸಿದಾಗ ಕಾರು ಕಂದಕಕ್ಕೆ ಉರುಳಿಬಿದ್ದಿರುವುದು ಗೊತ್ತಾಗಿದೆ. ಏಳು ಮಂದಿಯಿದ್ದ ಆ ಕಾರು ಕಂದಕಕ್ಕೆ ಬಿದ್ದ ಬಳಿಕ ಅಲ್ಲಿಂದ ಹೊರಬರಲಾಗದೆ ಸಾವಿನೊಂದಿಗೆ ಹೋರಾಡಿ ಐದು ಮಂದಿ ಮೃತಪಟ್ಟಿದ್ದು ಇಬ್ಬರು ಬದುಕು ಬಂದಿದ್ದಾರೆ.

ಚೆನ್ನೈ ಮೂಲದ ಸ್ನೇಹಿತರಾದ ರಾಮರಾಜೇಶ್, ರವಿವರ್ಮಾ, ಇಬ್ರಾಹಿಂ, ಜಯಕುಮಾರ್, ಅರುಣ್, ಅಮರನಾಥ್, ಜೂಡೋ ಸೆಪ್ಟೆಂಬರ್ 30ರಂದು ಕಾರಿನಲ್ಲಿ ಊಟಿಗೆ ಹೋಗಿದ್ದಾರೆ. ಅಲ್ಲಿನ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ಅಲ್ಲಿಂದ ಮುದುಮಲೈಗೆ ಹೊರಟರು. ಆದರೆ ವಾಪಸ್ ಬಂದಿರಲಿಲ್ಲ. ಎರಡು ದಿನಗಳಾದರೂ ಹೋಟೆಲ್‌ಗೆ ವಾಪಸ್ ಆಗಿರಲಿಲ್ಲ. ಇದರಿಂದ ಅನುಮಾನಗೊಂಡ ಹೋಟೆಲ್ ಆಡಳಿತ ಮಂಡಳಿ ಅವರ ಮೊಬೈಲ್‌ಗಳಿಗೆ ಕರೆ ಮಾಡಿದ್ದಾರೆ. ಆದರೆ ಅವೆಲ್ಲಾ ಸ್ವಿಚ್ ಆಫ್ ಆಗಿದ್ದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಊಟಿಯಿಂದ ಮುದುಮಲೈ ಮಾರ್ಗದಲ್ಲಿ ಪೊಲೀಸರು ಹುಡುಕಾಟ ಆರಂಭಿಸಿದರು. ಊಟಿ-ಕಲ್‌ಹಟ್ಟಿ ಘಾಟ್ ರಸ್ತೆ 35ನೇ ಕ್ರಾಸ್ ಬಳಿ ಪರೀಕ್ಷಿಸಿದಾಗ ಕಂದಕ್ಕೆ ಕಾರು ಬಿದ್ದಿರುವುದನ್ನು ಗುರುತಿಸಿದ್ದಾರೆ. ಸುಮಾರು 50-60 ಅಡಿ ಆಳದ ಕಂದಕವಾದ ಕಾರಣ ಕಾರಿನ ಬಳಿಗೆ ತಲುಪಲು ಸಾಧ್ಯವಾಗಿಲ್ಲ. ತುಂಬಾ ಕಷ್ಟಪಟ್ಟು ಒಂದಿಬ್ಬರು ಕಂದಕಕ್ಕೆ ಇಳಿದಿದ್ದಾರೆ. ಆದರೂ ಕಾರಿನ ಸಮೀಪಕ್ಕೆ ಹೋಗಲು ಸಾಧ್ಯವಾಗಿಲ್ಲ. ಕೊನೆಗೆ ರಕ್ಷಣಾ ಕಾರ್ಯಾಚರಣೆ ಪಡೆಯನ್ನು ಕರೆಸಲಾಗಿದೆ.

ಕಂದಕಕ್ಕೆ ಉರುಳಿಬಿದ್ದ ಕಾರು, 2 ದಿನ ಜೀವಹಿಡಿದೇ ಇದ್ದ ಇಬ್ಬರು

ಅದಾಗಲೆ ಕಾರಿನಲ್ಲಿದ್ದ ಐದು ಮಂದಿ ಮೃತಪಟ್ಟಿದ್ದರು. ಇನ್ನಿಬ್ಬರು ಉಸಿರಾಡುತ್ತಿದ್ದರು. ಒಂದು ಕಡೆ ಕತ್ತಲು ಆವರಿಸುತ್ತಿದ್ದರೂ ರಕ್ಷಣಾ ಕಾರ್ಯ ಮುಂದುವರೆಯಿತು. ಲೈಟಿಂಗ್ ವ್ಯವಸ್ಥೆ ಮಾಡಿ ಕಾರನ್ನು ಮೇಲಕ್ಕೆ ತರಲಾಗಿದೆ. ಅಪಘಾತ ಆಗಿ ಎರಡು ದಿನಗಳ ಕಾಲ ಅವರು ಜೀವನ್ಮರಣ ಹೋರಾಟ ನಡೆಸಿದ್ದರು. ಅಪಘಾತ ನಡೆದು ಎರಡು ದಿನಗಳಾಗಿದ್ದರೂ ಕಾರು ಕಂದಕಕ್ಕೆ ಬಿದ್ದಿರುವುದನ್ನು ಯಾರೂ ಗುರುತಿಸಿರಲಿಲ್ಲ.

ಅಪಘಾತಕ್ಕೆ ಸೂಕ್ತ ಕಾರಣ ತಿಳಿದುಬಂದಿಲ್ಲ. ತಿರುವಿನಲ್ಲಿ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರಾಮರಾಜೇಶ್, ಅರುಣ್‌ಗೆ ಊಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಬ್ಬರಿಗೆ ಪ್ರಜ್ಞೆ ಬಂದ ಬಳಿಕವಷ್ಟೇ ಅಪಘಾತ ವಿವರಗಳು ತಿಳಿಯಲಿವೆ.

“ಇಬ್ಬರನ್ನು ರಕ್ಷಿಸಲಾಗಿದ್ದು ಅವರು ಚಲಿಸಲಾಗದ ಸ್ಥಿತಿಯಲ್ಲಿದ್ದರು. ಕಾರಿನಲ್ಲಿ ಅವರಿಬ್ಬರ ಮೇಲೆ ಎರಡು ಹೆಣಗಳು ಬಿದ್ದಿದ್ದ ಕಾರಣ ಅವರು ಮಿಸುಕಾಡದಂತಾಗಿತ್ತು. ಮೂರು ದಿನಗಳ ಕಾಲ ಕಾರಿನಲ್ಲೇ ಜೀವ ಹಿಡಿದಿದ್ದು ನಿಜಕ್ಕೂ ಪವಾಡ.”
-ಷಣ್ಮುಗಂ ಪ್ರಿಯಾ, ನೀಲಗಿರಿ ಪೊಲೀಸ್ ವರಿಷ್ಠಾಧಿಕಾರಿ

Comments are closed.