ರಾಷ್ಟ್ರೀಯ

ಛತ್ತೀಸಗಡ ನಂತರ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನೊಂದಿಗಿನ ಮೈತ್ರಿಗೆ ಕೈಕೊಟ್ಟ ಬಿಎಸ್ ಪಿ

Pinterest LinkedIn Tumblr


ನವದೆಹಲಿ: ಬಿಜೆಪಿಯನ್ನು ಎದುರಿಸಲು ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದ ಕಾಂಗ್ರೆಸ್​​ಗೆ ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಿಎಸ್​ಪಿಯೂ ಮತ್ತೆ ಕೈಕೊಟ್ಟಿದೆ. ಛತ್ತೀಸಗಡ ರಾಜ್ಯದಲ್ಲಿಯಷ್ಟೇ ಅಲ್ಲದೇ ರಾಜಸ್ಥಾನ, ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೇ ಬಿಜೆಪಿ ವಿರುದ್ಧ ಏಕಾಂಗಿ ಹೋರಾಟಕ್ಕೆ ಸಜ್ಜಾಗಿದೆ.

ಕೆಲವು ದಿನಗಳಿಂದೆ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಛತ್ತೀಸಗಡದಲ್ಲಿ ಕಾಂಗ್ರೆಸ್​​ ಜತೆಗೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು. ಈ ಬೆನ್ನಲ್ಲೇ ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲೂ ಮೈತ್ರಿ ಬೇಕಿಲ್ಲ. ನಾವು ಎರಡು ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಲಿದ್ದೇವೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು.

ಕಾಂಗ್ರೆಸ್​​ನ ಮೈತ್ರಿ ಹಿಂದೆ ಸರಿದ ಬಿಜೆಪಿ ಈಗಾಗಲೇ ಚುನಾವಣೆ ಅಭ್ಯರ್ಥಿಗಳನ್ನು ಪಟ್ಟಿ ಘೋಷಿಸಿದೆ. ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌ ಜತೆ ಚುನಾವಣಾ ಪೂರ್ವ ಮೈತ್ರಿ ಅಸಾಧ್ಯ ಎಂಬುದಕ್ಕೆ ಮತ್ತಷ್ಟು ನಿದರ್ಶನ ಇದಾಗಿದೆ. ಮಧ್ಯಪ್ರದೇಶದಲ್ಲಿ ಸ್ಪರ್ಧಿಸಲಿರುವ 22 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದು, ಸದ್ಯದಲ್ಲೇ 40 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಲಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ರಾಷ್ಟ್ರಾದ್ಯಂತ ಕೇಸರಿ ವಿರೋಧಿ ಜಂಟಿ ಪಡೆ ಕಟ್ಟಲು ಕಾಂಗ್ರೆಸ್ ಮುಂದಾಗಿದೆ. ಸದ್ಯ ಕಾಂಗ್ರೆಸ್​​ ಆಸೆಗೆ ತಣ್ಣೀರೆರಚುವಂತಹ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳದಿರಲು ಟಿಆರ್​ಎಸ್ ನಿರ್ಧರಿಸಿದ ಬೆನ್ನಲ್ಲೇ ಛತ್ತೀಸ್​ಗಡದಲ್ಲೂ ಕಾಂಗ್ರೆಸ್​ಗೆ ಹಿನ್ನಡೆಯಾಗಿತ್ತು.

ಕಾಂಗ್ರೆಸ್​ನ ಉಚ್ಛಾಟಿತ ನಾಯಕ ಅಜಿತ್ ಜೋಗಿ ಅವರ ಛತ್ತೀಸ್​ಗಡ್ ಜನತಾ ಕಾಂಗ್ರೆಸ್ ಪಕ್ಷದ ಜೊತೆ ಬಿಎಸ್​ಪಿ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿತ್ತು. ಮಾಜಿ ಸಿಎಂ ಅಜಿತ್ ಜೋಗಿ ಅವರು ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಬಿಂಬಿತರಾಗಿದ್ದಾರೆ. ಛತ್ತೀಸ್​ಗಡ 90 ಕ್ಷೇತ್ರಗಳ ಪೈಕಿ ಜನತಾ ಕಾಂಗ್ರೆಸ್​​ಗೆ 55, ಉಳಿದ 35 ಕ್ಷೇತ್ರಗಳನ್ನು ಬಿಎಸ್​ಪಿಗೆ ಎಂದು ನಿರ್ಧರಿಸಲಾಗಿದೆ.

ಇನ್ನು ಕೆಲ ತಿಂಗಳಿನಿಂದ ಕಾಂಗ್ರೆಸ್ , ಬಿಎಸ್​ಪಿ ನಡುವೆ ಚುನಾವಣಾ ಪೂರ್ವ ಮೈತ್ರಿಯ ಮಾತುಕತೆ ನಡೆದಿತ್ತು. ಆದರೆ ಕಡಿಮೆ ಸೀಟು ನೀಡಲು ಕಾಂಗ್ರೆಸ್ ನಿರ್ಧರಿಸಿದ ಕಾರಣ ಬಿಎಸ್ ಪಿ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ. ಈ ಮಧ್ಯೆ ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಕಾಂಗ್ರೆಸ್ ಗೆ ಮಾಯಾವತಿ ಕೈಕೊಟ್ಟಿದ್ಧಾರೆ. ಹೀಗಾಗಿ ಮುಂದೆಯೂ ಕಾಂಗ್ರೆಸ್​​ ಪಾಲಿಗೆ ಕರಾಳ ದಿನಗಳು ಎದುರಾಗುವ ಸಾಧ್ಯತೆಯಿದೆ.

Comments are closed.