ರಾಷ್ಟ್ರೀಯ

ಗೋಏರ್‌ ವಿಮಾನದಲ್ಲಿ ಶೌಚಾಲಯಕ್ಕೆಂದು ಹೋಗಿ ಎಮರ್ಜೆನ್ಸಿ ಬಾಗಿಲು ತೆರೆದ!

Pinterest LinkedIn Tumblr


ಪಟನಾ: ಶೌಚಾಲಯದ ಬಾಗಿಲು ಎಂದು ತಿಳಿದುಕೊಂಡು ಚಲಿಸುತ್ತಿದ್ದ ವಿಮಾನದ ಎಮರ್ಜೆನ್ಸಿ ಗೇಟ್ ತೆರೆಯಲು ಹೋದ ವಿಲಕ್ಷಣ ಘಟನೆ ಗೋಏರ್‌ ವಿಮಾನದಲ್ಲಿ ನಡೆದಿದೆ. ಹೊಸದಿಲ್ಲಿಯಿಂದ ಪಟನಾಗೆ ತೆರಳುತ್ತಿದ್ದ ವಿಮಾನದ ಪ್ರಯಾಣಿಕ ಈ ರೀತಿ ಎಡವಟ್ಟು ಮಾಡಲು ಹೋಗಿದ್ದು, ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ.

150 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ G8-149 ವಿಮಾನ ಪಟನಾ ಏರ್‌ಪೋರ್ಟ್‌ನತ್ತ ಹೋಗುವ ಮಾರ್ಗ ಮಧ್ಯೆ ಯುವಕನೊಬ್ಬ ಇತರ ಪ್ರಯಾಣಿಕರ ದಿಗಿಲು ಮುಟ್ಟಿಸಿದ್ದಾನೆ. ವಿಮಾನದ ಶೌಚಾಲಯದ ಬಾಗಿಲು ಎಂದು ತಪ್ಪು ತಿಳಿದುಕೊಂಡು ಎಮರ್ಜೆನ್ಸಿ ಗೇಟ್ ತೆರೆಯಲು ಹೋಗಿದ್ದಾನೆ. ನಂತರ, ರಾತ್ರಿ 7.35ರ ವೇಳೆಗೆ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಆತನನ್ನು ಪಟನಾ ಏರ್‌ಪೋರ್ಟ್‌ ಪೊಲೀಸ್‌ ಠಾಣೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ( ಸಿಐಎಸ್‌ಎಫ್‌ ) ಸಿಬ್ಬಂದಿ ರವಾನಿಸಿದ್ದಾರೆ. ರಾಜಸ್ಥಾನದ ಅಜ್ಮೇರ್‌ನ ಪ್ರಮುಖ ಖಾಸಗಿ ಬ್ಯಾಂಕ್‌ವೊಂದರಲ್ಲಿ ಆತ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು, ಘಟನೆ ಬಗ್ಗೆ ಮಾಹಿತಿ ನೀಡಿದ ಪ್ರಯಾಣಿಕರು, ಆತ ತನ್ನ ಸೀಟಿನಿಂದ ಎದ್ದ ತಕ್ಷಣ ಎಮರ್ಜೆನ್ಸಿ ಗೇಟ್ ಕಡೆಗೆ ಹೋದ. ಬಳಿಕ, ಗೇಟ್ ತೆರೆಯಲು ಹೋದಾಗ ಹಲವು ಪ್ರಯಾಣಿಕರು ಕಿರುಚಿಕೊಂಡಿದ್ದು, ಕೆಲವರು ಅವನನ್ನು ಹಿಡಿದುಕೊಂಡಿದ್ದಾರೆ. ಆ ವೇಳೆ, ಕೆಲವರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಇನ್ನು, ವಿಮಾನದ ಹಿಂದಿನ ಬಾಗಿಲಿನ ಲಾಕ್ ತೆಗೆಯುವಲ್ಲಿ ಯಶಸ್ವಿಯಾಗಿದ್ದ ಆತ ಕ್ಯಾಬಿನ್ ಒತ್ತಡದಿಂದಾಗಿ ಬಾಗಿಲು ತೆಗೆಯಲು ಸಾಧ್ಯವಾಗಲಿಲ್ಲ. ಬಳಿಕ, ಸಹ ಪ್ರಯಾಣಿಕರು ಬಾಗಿಲು ತೆಗೆಯದಂತೆ ಮಾಡಿದ್ದು, ಗೇಟ್ ಲಾಕ್ ಮಾಡಿದ ನಂತರ ವಿಮಾನದ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ ಎಂದು ಸಿಐಎಸ್‌ಎಫ್‌ ಸಿಬ್ಬಂದಿ ತಿಳಿಸಿದ್ದಾರೆ.

ವಿಚಾರಣೆ ವೇಳೆ ಘಟನೆ ಬಗ್ಗೆ ಬಾಯ್ಬಿಟ್ಟಿರುವ ಕೃತ್ಯ ಎಸಗಿದ ವ್ಯಕ್ತಿ, ತಾನು ಮೊದಲನೇ ಬಾರಿ ವಿಮಾನದಲ್ಲಿ ಹೋಗುತ್ತಿದ್ದೆ. ಅದು ಎಮರ್ಜೆನ್ಸಿ ಗೇಟ್ ಎಂದು ತನಗೆ ಗೊತ್ತಿರಲಿಲ್ಲ. ಹೀಗಾಗಿ ತಪ್ಪಾಗಿ ಆ ಡೋರ್ ತೆಗೆಯಲು ಹೋದೆ ಅಷ್ಟೇ. ಇದರ ಹಿಂದೆ ಬೇರೆ ಯಾವುದೇ ದುರುದ್ದೇಶವಿರಲಿಲ್ಲ ಎಂದು ಹೇಳಿಕೊಂಡಿದ್ದಾನೆಂದು ಏರ್‌ಪೋರ್ಟ್ ಪೊಲೀಸ್‌ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ತಿಳಿಸಿದ್ದಾನೆ.

ಅಲ್ಲದೆ, ಬಾಂಡ್‌ಗೆ ಸಹಿ ಮಾಡಿದ ಬಳಿಕ ಬಿಹಾರದ ಪಟನಾದ ಕನ್ಕಾರ್‌ಬಾಗ್ ಪ್ರದೇಶದಲ್ಲಿ ತನ್ನ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಿಟ್ಟು ಕಳಿಸಿದ್ದಾರೆ.

Comments are closed.