ರಾಷ್ಟ್ರೀಯ

ಲೋಕಸಭಾ ಚುನಾವಣೆ: ಕಾಂಗ್ರೆಸ್​​-ಜೆಡಿಎಸ್​​​ ಮೈತ್ರಿಗೆ ರಾಹುಲ್​​ ಹಸಿರು ನಿಶಾನೆ!

Pinterest LinkedIn Tumblr


ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ಚರ್ಚೆ ಹಳೆಯ ವಿಚಾರ. ಆದರೆ, ಇಂದು ಕಾಂಗ್ರೆಸ್​​ ಹೈಕಮಾಂಡ್​​ ಜೆಡಿಎಸ್ ಜೊತೆ ಮೈತ್ರಿಗೆ ಗ್ರೀನ್ ಸಿಗ್ನಲ್ ನೀಡಿದೆ. ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಮೈತ್ರಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ನಡೆದ ಸಭೆ ನಡೆಸಲಾಗಿದೆ. ಸಭೆಯಲ್ಲಿ ಮೈತ್ರಿಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದ ರಾಜ್ಯ ನಾಯಕರು, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಕೂಡಲೇ ಈ ಸಂಬಂದ ಜೆಡಿಎಸ್​​ ಜೊತೆಗೆ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ.

ಇನ್ನು ಸೀಟು ಹಂಚಿಕೆಯ ಬಗ್ಗೆ ತೀರ್ಮಾನಕ್ಕೆ ಬಾರದ ಹೈಕಮಾಂಡ್, ಮೈತ್ರಿ ಮಾತುಕತೆ ಅಂತಿಮ ಮಾಡುವಂತೆ ವರಿಷ್ಠರಿಂದ ಮೌಕಿಕ ಸೂಚನೆ ಸಿಕ್ಕಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಕೆ.ಸಿ.‌ವೇಣುಗೋಪಾಲ್ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯ ಸಿದ್ದತೆಗಳು ನಡೆಯಲಿದೆ ಎನ್ನುತ್ತಿವೆ ದೆಹಲಿಯ ಎಐಸಿಸಿ ಮೂಲಗಳು.

ಲೋಕಸಭಾ ಚುನಾವಣೆಯ ತಯಾರಿ ದೇಶದಲ್ಲಿ ಜೋರಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿರುವ ಕಾರಣದಿಂದ ಸಹಜವಾಗಿ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಕುತೂಹಲವಿತ್ತು. ಅಲ್ಲದೇ ಎರಡು ಪಕ್ಷದ ನಾಯಕರು ಹಲವು ಬಾರಿ ಮೈತ್ರಿ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್- 18 ಮತ್ತು ಜೆಡಿಎಸ್‌ 10 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಹಳೇ ಮೈಸೂರು ಭಾಗದ ಬಹುತೇಕ ಕ್ಷೇತ್ರಗಳನ್ನು ಜೆಡಿಎಸ್ ಕೇಳುವ ಸಾಧ್ಯತೆ ಇದೆ. ಬೆಂಗಳೂರು ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಒಕ್ಕಲಿಗ ಮತಗಳು ಹೆಚ್ಚಿರುವ ಕಾರಣ ಕಾಂಗ್ರೆಸ್​​ ಜೆಡಿಎಸ್​ ಮಡಿಲಿಗೆ ಹಾಕಲು ನಿರ್ಧರಿಸಿದೆ.

ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು- ಉಡುಪಿ ಕ್ಷೇತ್ರಗಳಲ್ಲಿ ಜೆಡಿಎಸ್‌ ಮತಗಳು ಹೆಚ್ಚಿವೆ. ಜತೆಗೆ ಕಾಂಗ್ರೆಸ್ ಮತಗಳು ಕ್ರೋಢೀಕರಣಗೊಂಡರೆ ಗೆಲುವು ಸುಲಭ ಎನ್ನುವುದು ಜೆಡಿಎಸ್‌ ಲೆಕ್ಕಾಚಾರ. ಮೈಸೂರು ಲೋಕಸಭಾ ಕ್ಷೇತ್ರ ವಿಚಾರಕ್ಕೆ ಒಂದಷ್ಟು ತಿಕ್ಕಾಟ ನಡೆಯಬಹುದು. ,ಸಿದ್ದರಾಮಯ್ಯ ಮೈಸೂರು ಕ್ಷೇತ್ರವನ್ನು ಬಿಟ್ಟು ಕೊಡಲು ಹಿಂದೇಟು ಹಾಕಿದರೆ ಮೈತ್ರಿಯಲ್ಲಿ ಬಿರುಕು ಆದರೂ ಆಶ್ಚರ್ಯವಿಲ್ಲ.

ಸಿದ್ದರಾಮಯ್ಯನರೇ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಆಗ ಜೆಡಿಎಸ್ ಕಾಂಗ್ರೆಸ್ ‌ಗೆ ಬಿಟ್ಟು ಕೊಡುವ ಸಾಧ್ಯತೆ ಇದೆ. ಆದರೆ ಮಾಜಿ ಸಿಎಂ ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತೇನೆಂದು ಘೋಷಿಸಿದ್ದಾರೆ. ಒಂದು ವೇಳೆ ನಿಲ್ಲಲೇಬೇಕೆಂಬ ಒತ್ತಡ ಬಂದರೆ ಕೊಪ್ಪಳದ ಕಡೆ ಮುಖ ಮಾಡಲಿದ್ದಾರೆ. ಅಲ್ಲಿ ಕುರುಬ ಮತ್ತು ಅಹಿಂದ ಮತಗಳು ಹೆಚ್ಚಿವೆ.

ಹಾಸನ ಜಿಲ್ಲೆಯಲ್ಲಿ ಮಾತ್ರ ವಿರೋಧ ವ್ಯಕ್ತವಾಗಬಹುದು. ಅಲ್ಲಿ ದೇವೇಗೌಡರೇ ಸ್ಪರ್ಧಿಸಿದರೆ ಕಾಂಗ್ರೆಸ್ಸಿನವರು ಬೆಂಬಲಿಸುತ್ತಾರೆ. ಒಂದು ವೇಳೆ ಪ್ರಜ್ವಲ್ ರೇವಣ್ಣಗೆ ಜೆಡಿಎಸ್ ಟಿಕೆಟ್ ಕೊಟ್ಟರೆ ಕಾಂಗ್ರೆಸ್​ನಿಂದ ಭಾರೀ ವಿರೋಧ ಸಾಧ್ಯತೆಯಿದೆ. ಮಾಜಿ ಸಚಿವ ಎ. ಮಂಜು ಕೂಡ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿರುವುದರಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದರೆ ಕಾಂಗ್ರೆಸ್​ನವರು ವಿರೋಧಿಸುವ ಸಾಧ್ಯತೆ ಹೆಚ್ಚಿದೆ.

ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಗೀತಾ ಶಿವರಾಜ್‌ಕುಮಾರ್ ಅಥವಾ ಮಧು ಬಂಗಾರಪ್ಪ ಸ್ಪರ್ಧಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ನಿಂದ ಕಾಗೋಡು ತಿ್ಮ್ಮಪ್ಪನವರಿಗೆ ಆಸಕ್ತಿಯಿದ್ದರೂ ಅವರ ವಯಸ್ಸಿನ ಕಾರಣದಿಂದ ಹೈಕಮಾಂಡ್ ‌ಗೆ ಇಷ್ಟವಿಲ್ಲ. ಕಿಮ್ಮನೆ ರತ್ನಾಕರ್ ತಯಾರಿದ್ದಾರೆ ಆದರೆ ಪ್ರಬಲ ಅಭ್ಯರ್ಥಿ ಅಲ್ಲ.

ಬಿಜೆಪಿಯಿಂದ ಬಿಎಸ್​ವೈ ಮಗ ಬಿ.ವೈ ರಾಘವೇಂದ್ರ ಅಭ್ಯರ್ಥಿಯಾಗಿರುವುದರಿಂದ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಜೆಡಿಎಸ್​ ಮತ್ತು ಕಾಂಗ್ರೆಸ್​ಗಿದೆ. ಚಿಕ್ಕಮಗಳೂರು- ಉಡುಪಿ ಕ್ಷೇತ್ರದಲ್ಲಿ ಒಕ್ಜಲಿಗ ಮತಗಳಿವೆ. ಉಡುಪಿ ಭಾಗದಲ್ಲಿ ಎರಡೂ ಪಕ್ಷದಿಂದ ಎಂ‌ಎಲ್ಎಗಳೇ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಇದು ಬಿಜೆಪಿ ಭದ್ರಕೋಟೆ. ಹಾಗಾಗಿ ಕಾಂಗ್ರೆಸ್ ಗೆಲುವು ಕಷ್ಟ. ಈ ಕಾರಣಕ್ಕೆ ಜೆಡಿಎಸ್‌ಗೆ ಬಿಟ್ಟು ಕೊಡುವ ಲೆಕ್ಕಚಾರವನ್ನು ಕಾಂಗ್ರೆಸ್​ ಮಾಡುತ್ತಿದೆ.

ಸದ್ಯ ಕಾಂಗ್ರೆಸ್ 9 ಲೋಕಸಭಾ ಸದಸ್ಯರನ್ನು ಹೊಂದಿದೆ. ಬೆಂಗಳೂರು ಸೆಂಟ್ರಲ್ ನಲ್ಲಿ‌ ಜೆಡಿಎಸ್ ಬೆಂಬಲಿಸಿದ್ರೆ ಕಾಂಗ್ರೆಸ್ ‌ಗೆ ಅನುಕೂಲ. ಒಕ್ಜಲಿಗರೇ ಹೆಚ್ಚಿರುವ ಚಿಕ್ಕಬಳ್ಳಾಪುರ ಕ್ಷೇತ್ರ. ಜೆಡಿಎಸ್ ಬೆಂಬಲಿಸಿದರೆ ವೀರಪ್ಪ ಮೊಯ್ಲಿಗೆ ಜಯ. ಈಗಾಗಲೇ ಸ್ವಪಕ್ಷೀಯರೇ ಮೊಯ್ಲಿಗೆ ವಿರೋಧ. ಮೈತ್ರಿಯಿಂದ ಮೊಯ್ಲಿಗೆ ಗೆಲುವು ಸುಲಭ ಎನ್ನುವ ಲೆಕ್ಕಾಚಾರ.

ಅನಿವಾರ್ಯವಾಗಿ ಭಿನ್ನರು ಬಿಜೆಪಿಗೆ ಬೆಂಬಲಿಸುತ್ತಾರೆ. ಅದರಲ್ಲಿ ಕೆಲವರು ನೇರವಾಗಿ ಉಳಿದವರು ತೆರೆಮರೆಯಲ್ಲಿ. ಮೈತ್ರಿ ಜೊತೆಗೆ ಆಯಾ ಲೋಕಸಭಾ ಕ್ಷೇತ್ರ ಗಳ ಮುಖಂಡರ ಓಲೈಕೆ. ಓಲೈಕೆ ಮಾಡಿ ಮೈತ್ರಿ ಅಭ್ಯರ್ಥಿ ಗೆಲ್ಲುವಂತೆ ಮಾಡಬೇಕು. ಸದ್ಯ ಮೈತ್ರಿ ಜೊತೆಗೆ ಮನವೊಲಿಕೆ ದೊಡ್ಡ ಸವಾಲು ಎಂದು ತಿಳಿಸಿದ್ದಾರೆ.

Comments are closed.