ರಾಷ್ಟ್ರೀಯ

 ದೇಶದ ನೂತನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇಮಕ

Pinterest LinkedIn Tumblr


ಹೊಸದಿಲ್ಲಿ: ನ್ಯಾ. ರಂಜನ್ ಗೊಗೊಯಿ ಅವರು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಂಜನ್‌ ಗೊಗೊಯಿ ನೇಮಕ ಆದೇಶಕ್ಕೆ ಗುರುವಾರ ಸಹಿ ಹಾಕಿದರು.

ನ್ಯಾ. ದೀಪಕ್ ಮಿಶ್ರಾ ಅವರ ಅಧಿಕಾರಾವಧಿ ಅಕ್ಟೋಬರ್‌ 3ರಂದು ಕೊನೆಯಾಗುತ್ತಿದ್ದು, ನ್ಯಾ. ರಂಜನ್ ಗೊಗೊಯಿ ಅವರಿಗೆ ಅ. 3ರಂದು ರಾಷ್ಟ್ರಪತಿ ಪ್ರಮಾಣವಚನ ಬೋಧಿಸಲಿದ್ದಾರೆ. ನ. 17, 2019ರವರೆಗೆ ರಂಜನ್ ಗೊಗೊಯಿ ಅವರ ಅಧಿಕಾರಾವಧಿ ಇರಲಿದೆ.

ಸೆ. 4ರಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಸಿಜೆ ಹುದ್ದೆಗೆ ನ್ಯಾ. ರಂಜನ್ ಗೊಗೊಯಿ ಅವರ ಹೆಸರನ್ನು ಸೂಚಿಸಿದ್ದರು. ನ್ಯಾ. ಗೊಗೊಯಿ ಅವರು ದೇಶದ 46ನೇ ಮುಖ್ಯ ನ್ಯಾಯಮೂರ್ತಿಯಾಗಿರಲಿದ್ದು, ಹರಿಯಾಣ ಮತ್ತು ಪಂಜಾಬ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ ಬಳಿಕ 2012ರ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್‌ಗೆ ನೇಮಕಗೊಂಡಿದ್ದರು.

ಮೂಲತಃ ಅಸ್ಸಾಂನವರಾದ ರಂಜನ್ ಗೊಗೊಯಿ ಅವರು ಅಸ್ಸಾಂನ ಮಾಜಿ ಸಿಎಂ ಕೇಶವ್ ಚಂದ್ರ ಗೊಗೊಯಿ ಅವರ ಪುತ್ರರಾಗಿದ್ದು, ಈಶಾನ್ಯ ರಾಜ್ಯದ ಮೊದಲ ಸಿಜೆ ಆಗಿದ್ದಾರೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಕಳೆದ ಜನವರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದ ನಾಲ್ವರು ನ್ಯಾಯಾಧೀಶರಲ್ಲಿ ನ್ಯಾ. ರಂಜನ್ ಗೊಗೊಯಿ ಕೂಡ ಒಬ್ಬರಾಗಿದ್ದರು.

Comments are closed.