ರಾಷ್ಟ್ರೀಯ

ಎಲ್ಲರೊಂದಿಗೂ ಘನತೆ-ಗೌರವ ಪಡೆದುಕೊಂಡಿದ್ದ ವಾಜಪೇಯಿ ಬಗ್ಗೆ ಒಂದಿಷ್ಟು…

Pinterest LinkedIn Tumblr

ಹೊಸದಿಲ್ಲಿ: ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರದಲ್ಲಿದ್ದದ್ದು ಒಟ್ಟು ಆರು ವರ್ಷ ಮಾತ್ರ. ಆದರೆ ದೇಶಕ್ಕೆ ಅವರು ನೀಡಿದ ಅತಿದೊಡ್ಡ ಕೊಡುಗೆ ಎಂದರೆ ಪ್ರತಿಪಕ್ಷದಲ್ಲಿದ್ದುಕೊಂಡು ಕೂಡ ಗೌರವದ ಸ್ಥಾನ ಪಡೆದುಕೊಂಡದ್ದು. ಭಾರತೀಯ ಜನಸಂಘದ ನಾಯಕರಾಗಿದ್ದುಕೊಂಡು ರಾಜಕೀಯ ಜೀವನ ಆರಂಭಿಸಿದ ಅಟಲ್‌ ಜೀ, ನಂತರ ಪಕ್ಷದ ಸಂಘಟನೆ ಜತೆಗೆ ಬಲಪಂಥೀಯ ಹಿಂದು ರಾಷ್ಟ್ರೀಯ ಪಕ್ಷ ಎಂಬ ಹೆಸರಿನ ನಡುವೆಯೂ ಗೌರವ ಮತ್ತು ಘನತೆ ಪಡೆದುಕೊಂಡವರು.

1980ರಲ್ಲಿ ಬಿಜೆಎಸ್‌ ಮತ್ತು ಆರ್‌ಎಸ್‌ಎಸ್‌ ನಾಯಕರು, ಸಹೋದ್ಯೋಗಿಗಳು, ಪ್ರಮುಖವಾಗಿ ಲಾಲ್ ಕೃಷ್ಣ ಅಡ್ವಾಣಿ ಹಾಗು ಭೈರೋನ್ ಸಿಂಗ್ ಶೇಖಾವತ್ ಜತೆಗೂಡಿ ಭಾರತೀಯ ಜನತಾ ಪಾರ್ಟಿ ಸ್ಥಾಪಿಸಿ, ಅದರ ಮೊದಲ ಅಧ್ಯಕ್ಷರಾದರು. ಒಂದು ಪೂರ್ತಿ ಅವಧಿಗೆ ಸಮ್ಮಿಶ್ರ ಸರಕಾರವನ್ನು ಮುನ್ನಡೆಸಿ, ಯಾವುದೇ ತೊಂದರೆಯಿಲ್ಲದೆ ಸರಕಾರ ನಡೆಸಿದ್ದ ಅಟಲ್ ಜೀ, ಅತಿದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಅಧಿಪತ್ಯವನ್ನು ಕೊನೆಗಾಣಿಸಿದ್ದರು. ರಾಜಕೀಯದಲ್ಲಿ ಅವರಿಗಿದ್ದ ಬೆಂಬಲ ಮತ್ತು ಹಿಡಿತದಿಂದ ಅದು ಸಾಧ್ಯವಾಗಿತ್ತು.

ವಿಪಕ್ಷದಿಂದ ಆಡಳಿಕತ ಪಕ್ಷದವರೆಗೆ ಬರುವಲ್ಲಿ ಅಟಲ್ ಜೀ ಶ್ರಮ ಮತ್ತು ಅವರ ವರ್ಚಸ್ಸು ಗೋಚರಿಸುತ್ತಿತ್ತು. ಅವರ ರಾಜಕೀಯ ನೈಪುಣ್ಯತೆ ಗೋಚರವಾಗಿದ್ದು ಮಾರ್ಚ್‌ 24, 1977 ರಿಂದ ಜುಲೈ 28, 1979ರವರೆಗೆ ಮೊರಾರ್ಜಿ ದೇಸಾಯಿ ಸರಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ ಸಂದರ್ಭ.

ಆ ಎರಡು ವರ್ಷಗಳ ಅವಧಿಯಲ್ಲಿ ಅವರು ಮಾಡಿದ ಹಲವು ಮಹತ್ವದ ಕೆಲಸಗಳು ಇಂದಿಗೂ ಜನರ ನೆನಪಿನಲ್ಲಿ ಉಳಿದಿವೆ. 1962ರ ಸಿನೋ-ಇಂಡಿಯನ್ ಯುದ್ಧದ ಬಳಿಕ ಸ್ಥಗಿತವಾಗಿದ್ದ ಚೀನಾ ಮತ್ತು ಭಾರತ ನಡುವಣ ವ್ಯಾಪಾರ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಸರಿಪಡಿಸುವ ಸಲುವಾಗಿ 1979ರಲ್ಲಿ ಚೀನಾಗೆ ಐತಿಹಾಸಿಕ ಭೇಟಿ ನೀಡಿ ಅಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದರಿಂದ ಉಭಯ ರಾಷ್ಟ್ರಗಳ ನಡುವಣ ಸಂಬಂಧ ವೃದ್ಧಿಯಾಯಿತು.

ಅದೇ ರೀತಿಯಲ್ಲಿ 1971ರ ಭಾರತ-ಪಾಕಿಸ್ತಾನ ಯುದ್ಧದ ಬಳಿಕ ಹದಗೆಟ್ಟಿದ್ದ ಎರಡು ರಾಷ್ಟ್ರಗಳ ನಡುವಣ ಸಂಬಂಧವನ್ನು ಸರಿಪಡಿಸಲು ಪಾಕ್‌ಗೆ ಭೇಟಿ ನೀಡಿ, ವ್ಯಾಪಾರ ಒಪ್ಪಂದ ಮತ್ತು ಇತರ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಕ್ರಮ ಕೈಗೊಂಡರು. ನಿಶ್ಯಸ್ತ್ರೀಕರಣ ಕುರಿತ ಜಾಗತಿಕ ಸಮ್ಮೇಳನದಲ್ಲಿ ಪಾಲ್ಗೊಂಡ ಅಟಲ್ ಜೀ, ರಾಷ್ಟ್ರೀಯ ಅಣುಶಕ್ತಿ ಯೋಜನೆಯನ್ನು ಸಮರ್ಥಿಸಿಕೊಂಡು, ದೇಶದ ಭದ್ರತೆ ಮತ್ತು ರಕ್ಷಣೆಯ ಕುರಿತಾಗಿ ಅಣುಶಕ್ತಿ ಬಳಸುತ್ತಿದ್ದೇವೆ ಎಂದು ಹೇಳಿದ್ದರು.

1979ರಲ್ಲಿ ಅವರು ರಾಜೀನಾಮೆ ನೀಡಬೇಕಾಗಿ ಬಂದರೂ, ರಾಜಕೀಯ ಚತುರತೆ ಮತ್ತು ನಾಯಕತ್ವದಲ್ಲಿನ ಹಿಡಿತವನ್ನು ಎರಡೇ ವರ್ಷದಲ್ಲಿ ರೂಪಿಸಿದ್ದರು. 1977ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ಮೊದಲ ಹಿಂದಿ ಭಾಷಣ ಮಾಡಿದ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಅದನ್ನು ಜೀವನದಲ್ಲೇ ಮರೆಯಲಾಗದ ಕ್ಷಣ ಎಂದು ಅಟಲ್ ಹೇಳಿಕೊಂಡಿದ್ದರು.

Comments are closed.