
ಈ ವರ್ಷಾಂತ್ಯದಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಅನುಭವಿಸಲಿದೆ ಎಂದು ಈಗಾಗಲೇ ಹೊರಬಿದ್ದಿರುವ ಸಿವೋಟರ್ ಮತ್ತು ಎಬಿಪಿ ನ್ಯೂಸ್ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಹೀಗಾಗಿ, ಕಾಂಗ್ರೆಸ್ಗೆ ಈ ಮೂರು ರಾಜ್ಯಗಳ ಗೆಲುವು ಹೆಚ್ಚಿನ ಬಲ ತುಂಬಲಿದೆ ಎನ್ನಲಾಗುತ್ತಿದೆ.
ಸದ್ಯಕ್ಕೆ ದೇಶದಲ್ಲಿರುವ ಮೋದಿಯ ಅಲೆಯಿಂದಾಗಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಈ ನಷ್ಟವನ್ನು ತುಂಬಿಕೊಳ್ಳುವ ಸಾಧ್ಯತೆಗಳಿವೆ ಎಂದು ಕೂಡ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಈ ಸಮೀಕ್ಷೆಯ ಪ್ರಕಾರ, ಮೂರು ರಾಜ್ಯಗಳಲ್ಲಿಯೂ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದುವ ಮೂಲಕ ಅಧಿಕಾರಕ್ಕೆ ಬರಲಿದೆ. ಮಧ್ಯಪ್ರದೇಶದಲ್ಲಿ 230ಕ್ಕೆ 117 ಸ್ಥಾನ, ಛತ್ತೀಸ್ಗಢದಲ್ಲಿ 90ರಲ್ಲಿ 54 ಸ್ಥಾನ ಹಾಗೂ ರಾಜಸ್ಥಾನದಲ್ಲಿ 200ಕ್ಕೆ 130 ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಳ್ಳಲಿದೆ ಎನ್ನಲಾಗಿದೆ.
ಸಿವೋಟರ್ ಮತ್ತು ಎಬಿಪಿ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 28,000 ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಬೇರೆ ಬೇರೆ ಮನೋಭಾವದ, ಉದ್ಯೋಗದವರನ್ನು ಸಮೀಕ್ಷೆಯಲ್ಲಿ ಒಳಗೊಳ್ಳಲಾಗಿದೆ. ದೇಶದ ಉನ್ನತ ಸ್ಥಾನಕ್ಕೆ ಈ ಬಾರಿಯೂ ಜನ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡುವುದಾಗಿ ಸಮೀಕ್ಷೆಯಲ್ಲಿ ಹೇಳಿದ್ದಾರೆ. ಎರಡನೇ ಆಯ್ಕೆಯಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿದ್ದಾರೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ಗೆ ಲಾಭ:
ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅತ್ಯಂತ ದೊಡ್ಡ ಲಾಭವಾಗಲಿದೆ. ಕಾಂಗ್ರೆಸ್ಗೆ ಶೇ. 51 ಮತಗಳು ಲಭಿಸಲಿದ್ದು, ಬಿಜೆಪಿ ಶೇ. 37ರಷ್ಟು ಮತಗಳನ್ನು ಪಡೆಯಲಿದೆ. 2013ರ ಚುನಾವಣೆಯಲ್ಲಿ ಬಿಜೆಪಿ 163 ಸೀಟುಗಳನ್ನು ಹೊಂದುವ ಮೂಲಕ ರಾಜಸ್ಥಾನದಲ್ಲಿ ಜಯಭೇರಿ ಬಾರಿಸಿತ್ತು. ಅದು ಈ ಬಾರಿ ಉಲ್ಟಾ ಆಗಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 47 ಸೀಟುಗಳನ್ನು ಪಡೆಯಲಿದ್ದು, ಕಾಂಗ್ರೆಸ್ ಶೇ. 43 ಸೀಟುಗಳನ್ನು ಗೆಲ್ಲಲಿದೆ. ಶೇ.55ರಷ್ಟು ಜನರು ಎರಡನೇ ಅವಧಿಗೂ ಮೋದಿ ಅವರೇ ಪ್ರಧಾನಿಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಶೇ. 42 ಸೀಟು ಮತ್ತು ಬಿಜೆಪಿಗೆ ಶೇ. 40 ಸೀಟುಗಳು ದೊರೆಯಲಿವೆ ಎನ್ನಲಾಗಿದೆ. ಇಲ್ಲಿ ಕೂಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಲಭಿಸಲಿವೆ. ಕಾಂಗ್ರೆಸ್ಗೆ ಶೇ. 39 ಮತ್ತು ಬಿಜೆಪಿಗೆ ಶೇ. 40ರಷ್ಟು ಮತಗಳು ಲಭಿಸುವ ಮೂಲಕ ಬಿಜೆಪಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ.
ಛತ್ತೀಸ್ಗಢದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ತೀವ್ರ ಪೈಪೋಟಿ ಏರ್ಪಡಲಿದೆ. ಬಿಜೆಪಿ ಶೇ. 39 ಮತಗಳನ್ನು ಪಡೆದುಕೊಂಡರೆ ಕಾಂಗ್ರೆಸ್ ಶೇ. 40ರಷ್ಟು ಮತಗಳನ್ನು ಪಡೆಯುವ ಮೂಲಕ ಅತ್ಯಂತ ಕಡಿಮೆ ಅಂತರದಲ್ಲಿ ಗೆಲುವು ಪಡೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆ ವರದಿ ತಿಳಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶೇ. 46 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ ಶೇ. 36ರಷ್ಟು ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆಯಲಿದೆ. ಈ ಮೂರೂ ರಾಜ್ಯಗಳಲ್ಲಿ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರ ಕಡೆಗೆ ಜನರು ಹೆಚ್ಚಿನ ಒಲವು ತೋರಿದ್ದಾರೆ.
Comments are closed.