ರಾಷ್ಟ್ರೀಯ

ಕರುಣಾನಿಧಿ ಅವರ ಕಪ್ಪು ಕನ್ನಡಕ ಮತ್ತು ಹಳದಿ ಶಾಲಿನ ರಹಸ್ಯ

Pinterest LinkedIn Tumblr

– ರಾಜಶೇಖರ್ ಬಂಡೆ

ವಿದ್ಯಾರ್ಥಿ ಸಂಘಟನೆ ಮೂಲಕ ರಾಜಕೀಯಕ್ಕಿಳಿದ ಕರುಣಾನಿಧಿ ಆಕಸ್ಮಿಕವಾಗಿ ಸಿಎಂ ಕೂಡ ಆಗಿದ್ರು. ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಕರುಣಾನಿಧಿ ಒಟ್ಟು ಐದು ಅವಧಿಗೆ 19 ವರ್ಷಗಳ ಕಾಲ ಸಿಎಂ ಆಗಿದ್ದವರು. ಒಂದಷ್ಟು ವಿವಾದ, ವಿಪರೀತ ಅಭಿಮಾನಿಗಳನ್ನ ಸೃಷ್ಟಿಸಿಕೊಂಡಿದ್ದ ಕರುಣಾನಿಧಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿದ್ರು. ದೇಶದ ಯಾವ ಮೂಲೆಯ ಯಾವ ವ್ಯಕ್ತಿಯ ಬಳಿ ಕರುಣಾನಿಧಿಯ ಬಗ್ಗೆ ವಿಚಾರಿಸಿದ್ರೆ ಅವರು ಕರುಣಾನಿಧಿಯನ್ನ ಗುರುತಿಸ್ತಾ ಇದ್ದದ್ದು ಗಾಢ ಕಪ್ಪು ಕನ್ನಡಕ ಹಾಗೂ ಹಳದಿ ಶಾಲು. ಒಂದು ಲೆಕ್ಕಾಚಾರದಲ್ಲಿ ಕನ್ನಡಕ ಮತ್ತು ಹಳದಿ ಶಾಲೇ ಕರುಣಾನಿಧಿಯ ಟ್ರೇಡ್​ ಮಾರ್ಕ್​ ಆಗಿಬಿಟ್ಟಿದ್ವು.

17 ವರ್ಷಗಳ ಕಾಲ ಕಣ್ಣಿನ ಸಮಸ್ಯೆಯಿಂದ ಬಳಲಿದ್ದರಾ ಕರುಣಾನಿಧಿ?

1954 ರಲ್ಲಿ ಕರುಣಾನಿಧಿಯವರಿಗೆ ಕಣ್ಣಿನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತಂತೆ. ಬರೋಬ್ಬರಿ 17 ವರ್ಷಗಳ ಕಾಲ ಆ ನೋವನ್ನ ಒಂದು ಸಾಮಾನ್ಯ ಸಮಸ್ಯೆ ಎಂಬಂತೆಯೇ ಪರಿಗಣಿಸಿ ಅಷ್ಟಾಗಿ ನಿಗಾ ವಹಿಸಿರಲಿಲ್ಲ. ಆದ್ರೆ 1967 ರಲ್ಲಿ ಅಪಘಾತವೊಂದರಲ್ಲಿ ಕರುಣಾನಿಧಿಯವರ ಎಡಗಣ್ಣಿಗೆ ಬಲವಾದ ಪೆಟ್ಟು ಬಿದ್ದಿತ್ತು. ನಾಲ್ಕು ವರ್ಷಗಳವರೆಗೆ ಆ ನೋವನ್ನೂ ನುಂಗಿಕೊಂಡ ಕರುಣಾನಿಧಿ ಕೊನೆಗೆ 1971 ರಲ್ಲಿ ಅಮೆರಿಕಾದ ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆಗ ಧರಿಸಿದ ಕನ್ನಡಕವೇ ಕರುಣಾನಿಧಿಯವರ ಟ್ರೇಡ್ ಮಾರ್ಕ್ ಆಗಿಬಿಟ್ಟಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಕಪ್ಪು ಕನ್ನಡಕ ಇಲ್ಲದೆ ಕರುಣಾನಿಧಿ ಕಾಣಿಸಿಕೊಳ್ತಾ ಇರಲಿಲ್ಲ. ಕೆಲವರು ತಮಿಳುನಾಡಿನ ಹೆಸರಾಂತ ನಟ ಹಾಗೂ ರಾಜಕಾರಣಿಯಾಗಿದ್ದ ಎಂ.ಜಿ. ರಾಮಚಂದ್ರನ್​ ಅವರನ್ನ ಫಾಲೋ ಮಾಡ್ತಿದ್ದಾರೆ ಅಂತ ಮಾತನಾಡಿಕೊಂಡಿದ್ರು.

ಕಪ್ಪು ಕನ್ನಡಕದ ಸುತ್ತ ಗಾಸಿಪ್​ಗಳ ಹುತ್ತ!

ಕರುಣಾನಿಧಿಯವರ ಗಾಢ ಕಪ್ಪು ಕನ್ನಡಕದ ಸುತ್ತ ಒಂದಷ್ಟು ಊಹೆಗಳು ಹಾಗೂ ಕಥೆಗಳೂ ಹುಟ್ಟಿಕೊಂಡಿದ್ವು. ಕೆಲವರು ಹಿಂದಿ ವಿರೋಧಿ ಪ್ರತಿಭಟನೆಯೊಂದರಲ್ಲಿ ಪೊಲೀಸರಿಂದ ಹಲ್ಲೆಗೊಳಗಾದಾಗ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿತ್ತು ಹಾಗಾಗಿ ಕನ್ನಡಕ ಧರಿಸ್ತಾ ಇದ್ರು ಅಂದ್ರೆ. ಮತ್ತೆ ಕೆಲವರು ಸ್ಟೈಲ್​ ಮಾಡೋದಕ್ಕೆ ಕನ್ನಡಕ ಧರಿಸ್ತಾರೆ ಅಂತಲೂ ಹೇಳಿದ್ರು.

46 ವರ್ಷಗಳ ನಂತರ ಬದಲಾಗಿತ್ತು ಕನ್ನಡಕ!

ಬರೋಬ್ಬರಿ 4 ದಶಕಗಳ ಕಾಲ ಕರುಣಾನಿಧಿ ಗಾಢ ಕಪ್ಪು ಕನ್ನಡಕವನ್ನೇ ಧರಿಸಿದ್ರು. ಕೆಲವರು ಗಾಢ ಕಪ್ಪು ಕನ್ನಡಕದ ಹಿಂದೆ ಎಂಥದ್ದೋ ಸೀಕ್ರೆಟ್​ ಇದೆ ಅಂತಲೇ ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಅವರ ಕನ್ನಡಕ ಸದ್ದು ಮಾಡಿತ್ತು. ಬರೋಬ್ಬರಿ 46 ವರ್ಷಗಳ ನಂತರ ಅವರ ವೈಯಕ್ತಿಕ ವೈದ್ಯರ ಸಲಹೆಯ ಮೇರೆಗೆ ತಮ್ಮ ಕನ್ನಡಕವನ್ನ ಬದಲಾಯಿಸುವ ನಿರ್ಧಾರಕ್ಕೆ ಬಂದಿದ್ರು. ಆದ್ರೆ ಅಲ್ಲೊಂದು ಸಮಸ್ಯೆ ಎದುರಾಗಿತ್ತು. ಭಾರತದ ಮೂಲೆ ಮೂಲೆಯನ್ನ ಹುಡುಕಾಡಿದ್ರೂ ಕರುಣಾನಿಧಿಯವರಿಗೆ ಹೋಲುವ ಕನ್ನಡಕ ಪತ್ತೆಯಾಗಿರಲಿಲ್ಲ. 40 ದಿನಗಳ ಕಾಲ ಕರುಣಾನಿಧಿಯವರ ಮುಖಕ್ಕೆ ಹೋಲುವ ಕನ್ನಡಕಕ್ಕಾಗಿ ಸುದೀರ್ಘ ಹುಡುಕಾಟ ಪ್ರಾರಂಭವಾಗಿತ್ತು.

ಜರ್ಮನಿಯಲ್ಲಿತ್ತು ಕರುಣಾನಿಧಿ ಮುಖಕ್ಕೆ ಒಪ್ಪುವ ಹೊಸ ಕನ್ನಡಕ!

46 ವರ್ಷಗಳ ಕಾಲ ತಮ್ಮ ರಾಜಕೀಯ ಬದುಕಿಗೆ ಸಾಕ್ಷಿಯಾಗಿದ್ದ ದೊಡ್ಡ ಕಪ್ಪು ಕನ್ನಡಕಕ್ಕೆ ಕರುಣಾನಿಧಿ ವಿದಾಯ ಹೇಳುವ ಸಮಯ ಬಂದಿತ್ತು. ನಾಲ್ಕೂವರೆ ದಶಕಗಳ ಕಾಲ ಕರುಣಾನಿಧಿಯವರ ಏಳುಬೀಳುಗಳಿಗೆ ಸಾಕ್ಷಿಯಾಗಿದ್ದ ಗಾಢ ಕಪ್ಪು ಕನ್ನಡಕ ಇದ್ದಕ್ಕಿದ್ದಂತೆ ಭಾರ ಎನ್ನಿಸಿತ್ತು. ಕಿವಿ ಮತ್ತು ಕಣ್ಣುಗಳ ನಡುವೆ ದೊಡ್ಡ ಕನ್ನಡಕದಿಂದಾಗಿ ನೋವು ಕಾಣಿಸಿಕೊಳ್ತಾ ಇತ್ತು. ಹೀಗಾಗಿ ಹೊಸ ಕನ್ನಡಕಕ್ಕೆ ಹುಡುಕಾಟ ಪ್ರಾರಂಭಿಸಿದ ಕರುಣಾನಿಧಿ ಕುಟುಂಬ ಮತ್ತು ಸ್ನೇಹತರಿಗೆ ಇಡೀ ಭಾರತವನ್ನೇ ಜಾಲಾಡಿದ್ರೂ ಕರುಣಾನಿಧಿ ಮುಖಕ್ಕೊಪ್ಪುವ ಕನ್ನಡಕ್ಕೆ ಸಿಗಲೇ ಇಲ್ಲ. ಆಗ ಸ್ನೇಹಿತರ ಸಹಾಯದಿಂದ ಜರ್ಮನಿ ದೇಶದಲ್ಲಿ ಕರುಣಾನಿಧಿಗೆ ಹೊಂದುವ ಕನ್ನಡಕವನ್ನ ಹುಡುಕಲಾಗಿತ್ತು. ಗಾಢ ಕಪ್ಪು ಬಣ್ಣದ ಕನ್ನಡಕದ ಜಾಗದಲ್ಲಿ ಜರ್ಮನಿಯಿಂದ ಬಂದ ತೆಳು ಪಾರದರ್ಶಕ ಕನ್ನಡಕ ಜಾಗ ಪಡೆದುಕೊಂಡಿತ್ತು.

ಕರುಣಾನಿಧಿ ಮೊದಲು ಧರಿಸ್ತಾ ಇದ್ದ ಗಾಢ ಕಪ್ಪು ಕನ್ನಡಕದಿಂದಾಗಿ ಅವರ ಕಣ್ಣುಗಳು ಮರೆಯಾಗ್ತಾ ಇದ್ದಿದ್ದರಿಂದ ಅದೆಷ್ಟೋ ಜನರಿಗೆ ಕರುಣಾನಿಧಿ ಕಣ್ಣುಗಳು ಹೇಗಿವೆ ಅನ್ನೋ ಕುತೂಹಲ ಸೃಷ್ಟಿಯಾಗಿತ್ತು. ಕರುಣಾನಿಧಿ ವಿರೋಧಿಗಳು, ಕರುಣಾನಿಧಿ ತಾನು ಮಾಡಿದ ಭ್ರಷ್ಟಾಚಾರದ ಛಾಯೆ ಕಣ್ಣಿನಲ್ಲಿ ಗೋಚರವಾಗಬಾರದು ಅನ್ನೋ ಕಾರಣಕ್ಕೆ ಗಾಢ ಕಪ್ಪು ಕನ್ನಡಕ ಧರಿಸ್ತಾರೆ ಅಂತ ಮಾತನಾಡಿಕೊಂಡ್ರೆ. ಮತ್ತೂ ಕೆಲವರು ಕರುಣಾನಿಧಿಯವರ ಒಂದು ಕಣ್ಣು ಸಂಪೂರ್ಣ ಹಾಳಾಗಿದೆ, ಹಾಗಾಗಿಯೇ ಅದನ್ನ ಮುಚ್ಚಿಡಲು ಕನ್ನಡಕ ಬಳಸ್ತಿದ್ದಾರೆ ಅಂತ ಸಂಶಯಪಟ್ಟಿದ್ರು. ಮತ್ತೂ ಕೆಲವರು ತಮಿಳುನಾಡಿನ ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಹೀಗೆ ಗಾಢ ಕಪ್ಪುಬಣ್ಣದ ಕನ್ನಡಕ ಧರಿಸುವ ಶೋಕಿ ಇದೆ ಅಂತಲೂ ವ್ಯಂಗ್ಯವಾಡಿದ್ರು.

ಹಳೇ ಕನ್ನಡಕ ಹೋಗಿ ಹೊಸ ಕನ್ನಡಕ ಬಂದ್ರೂ ಕರುಣಾನಿಧಿಯವರ ಗತ್ತು ಗೈರತ್ತುಗಳು ಕಡಿಮೆಯಾಗಿರಲಿಲ್ಲ. ದಶಕಗಳ ಕಾಲ ವ್ಹೀಲ್​ ಚೇರ್ ಮೇಲೇ ಬದುಕು ಸಾಗಿಸಿದ್ರೂ ತಮ್ಮ ಹೋರಾಟದ ಗುಣಗಳನ್ನ ಕಳೆದುಕೊಂಡಿರಲಿಲ್ಲ. ದ್ರಾವಿಡ ಚಳುವಳಿಗೆ ಜೀವಾಳವಾದ ಕರುಣಾನಿಧಿ ಕಾವೇರಿ ವಿಚಾರದಲ್ಲೂ ನಿರಂತರ ಹೋರಾಟ ನಡೆಸಿದ್ರು. 19 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ರು. ದೇಶವೇ ಮೆಚ್ಚುವಂಥ ರಾಜಕಾರಣಿ ಅನ್ನಿಸಿಕೊಂಡ್ರು. ಹತ್ತಾರು ವಿವಾದಗಳನ್ನ ಮೈಮೇಲೆ ಎಳೆದುಕೊಂಡ್ರು. ಈ ಎಲ್ಲ ಏಳುಬೀಳುಗಳಲ್ಲೂ ಕನ್ನಡಕವೊಂದು ಕರುಣಾನಿಧಿಯವರಿಗೆ ಜೊತೆಯಾಗಿಯೇ ಇತ್ತು. ಇದಿಷ್ಟು ಕರುಣಾನಿಧಿಯವರ ಕನ್ನಡಕದ ಹಿಂದಿನ ಮಿಸ್ಟರಿಯಾದ್ರೆ, ಅವರ ಹೆಗಲ ಮೇಲಿರುತ್ತಿದ್ದ ಹಳದಿ ಶಾಲಿನ ಹಿಂದೆಯೂ ಕೂಡ ಒಂದು ಇಂಟ್ರಸ್ಟಿಂಗ್ ಸ್ಟೋರಿ ಇದೆ,

ಹಳದಿ ಶಾಲಿನ ಹಿಂದಿನ ಅಸಲಿ ಸೀಕ್ರೆಟ್ ಏನು?

ತಮಿಳುನಾಡಿನ ಯಾವ ಮಹಾನಾಯಕರನ್ನ, ಅಥವಾ ರಾಜಕಾರಣಿಗಳನ್ನ ನೋಡಿದ್ರೂ ಅವರದ್ದೇ ಆದ ಒಂದು ಟ್ರೇಡ್ ಮಾರ್ಕ್​ಇರುತ್ತೆ. ತಮಿಳಿನ ಮಹಾನಟ ಅನ್ನಿಸಿಕೊಂಡಿದ್ದ ಎಂಜಿಆರ್ ಕನ್ನಡಕ ಟೋಪಿ ಇಲ್ಲದೆ ಹೊರಗಡೆ ಕಾಣಿಸಿಕೊಳ್ತಾ ಇರ್ಲಿಲ್ಲ. ಜಯಲಲಿತಾ ಯಾವಾಗಲೂ ಹಸಿರು ಸೀರೆಯುಡುತ್ತಾ ಇದ್ರು, ಹೀಗೆ ಕರುಣಾನಿಧಿ ಕೂಡ ಕನ್ನಡಕ ಮತ್ತು ಹೆಗಲ ಮೇಲೆ ಹಳದಿ ಶಾಲಿಲ್ಲದೆ ಹೊರಗಡೆ ಕಾಲಿಡ್ತಾನೇ ಇರ್ಲಿಲ್ಲವಂತೆ. ಕರುಣಾನಿಧಿಯವರ ಬಹುತೇಕ ಫೋಟೋಗಳಲ್ಲಿ ಅವರ ಹೆಗಲ ಮೇಲೊಂದು ಹಳದಿ ಶಾಲು ಇದ್ದೇ ಇರ್ತಿತ್ತು.

ಹಳದಿ ಬಣ್ಣಕ್ಕೂ ಪೆರಿಯಾರ್​ಗೂ ಇತ್ತಾ ಲಿಂಕ್?

1940 ರ ದಶಕದಲ್ಲಿ ಜಾತಿ ತಾರತಮ್ಯದ ವಿರುದ್ಧ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಿದ್ದ, ದ್ರಾವಿಡರ್ ಕಳಗಮ್ ಹೋರಾಟವನ್ನ ಹುಟ್ಟುಹಾಕಿದ್ದ, ಪೆರಿಯಾರ್ ಇವಿ ರಾಮಸಾಮಿ ವಿಭಿನ್ನ ರೀತಿಯ ಚಳುವಳಿಯೊಂದನ್ನ ಹುಟ್ಟುಹಾಕಿದ್ರು. ಹಳದಿ ಬಣ್ಣವನ್ನ ಸಮಾನತೆಯ ಪ್ರತೀಕವೆಂದು ಘೋಷಿಸಿದ್ರು. ಪೆರಿಯಾರ್ ತತ್ವ ಆದರ್ಶಗಳನ್ನ ಬಲವಾಗಿ ನಂಬಿದ್ದ ಮತ್ತು ಅವರ ಹಾದಿಯಲ್ಲೇ ಸಾಗಿದ ಕರುಣಾನಿಧಿ ಅದೇ ಬಣ್ಣದ ಶಾಲನ್ನ ಧರಿಸೋದಕ್ಕೆ ತೀರ್ಮಾನಿಸಿದ್ದರಂತೆ.

ಬುದ್ಧನಿಗೂ ಕರುಣಾನಿಧಿ ಶಾಲಿಗೂ ಸಂಬಂಧ?

ಭಗವಾನ್ ಬುದ್ಧ ಜ್ಞಾನೋದಯದ ನಂತರ ಸಂಚಾರ ಪ್ರಾರಂಭಿಸಿ ಅಜ್ಞಾನ, ಮೂಢನಂಬಿಕೆ, ಜಾತಿ ತಾರತಮ್ಯಗಳ ಬಗ್ಗೆ ಸಂದೇಶ ಸಾರುತ್ತಾ ತಮ್ಮ ಮುಂದಿನ ಬದುಕನ್ನ ಸಮಾಜಸೇವೆಗೆ ಮೀಸಲಿಟ್ಟಿದ್ರು. ಅವರು ಸನ್ಯಾಸ ಸ್ವೀಕರಿಸಿದ ನಂತರ ಸಹಜ ಧಿರಿಸನ್ನ ಕಳಚಿ ಹಳದಿ ಬಣ್ಣದ ವಸ್ತ್ರವನ್ನೇ ಅಂಗವಸ್ತ್ರವಾಗಿಸಿಕೊಂಡಿದ್ದರಂತೆ. ಇದೇ ಕಾರಣಕ್ಕೂ ಸಾಂಕೇತಿಕವಾಗಿ ಕರುಣಾನಿಧಿ ಹಳದಿ ಶಾಲನ್ನ ಹೆಗಲಿಗೆ ಹಾಕಿಕೊಳ್ತಾ ಇದ್ರು ಅನ್ನಲಾಗುತ್ತೆ.

ಪಾರ್ಟಿ ಸಿಂಬಲ್​ಗೆ ಮ್ಯಾಚ್ ಆಗ್ತಾ ಇತ್ತಾ ಹಳದಿ ಶಾಲು!

ತಮಿಳುನಾಡಿನ ವರ್ಣರಂಜಿತ ರಾಜಕೀಯದಲ್ಲಿ ಒಂದಷ್ಟು ಇಂಟ್ರಸ್ಟಿಂಗ್ ವಿಷಯಗಳಿವೆ. ಅವುಗಳಲ್ಲಿ ಒಂದೊಂದು ರಾಜಕೀಯ ಪಕ್ಷದ ಥೀಮ್ ಕಲರ್ ವಿಭಿನ್ನವಾಗಿರುತ್ತೆ. ಉದಾಹರಣೆಗೆ ಜಯಲಲಿತಾ ಪ್ರತಿನಿಧಿಸುತ್ತಿದ್ದ ಎಐಎಡಿಎಮ್​ಕೆ ಪಕ್ಷವನ್ನೇ ತೆಗೆದುಕೊಳ್ಳಿ. ಆ ಪಕ್ಷದ ಥೀಮ್ ಕಲರ್ ಹಸಿರು. ಪಕ್ಷದ ಲೋಗೋವಿನಿಂದ ಹಿಡಿದು, ಬ್ಯಾನರ್​ಗಳವರೆಗೆ ಎಲ್ಲವೂ ಹಸಿರುಮಯ. ಸ್ವತಃ ಜಯಲಲಿತಾ ಕೂಡ ಒಂದು ಕಾಲದವರೆಗೆ ಹಸಿರು ಸೀರೆಯನ್ನುಟ್ಟೇ ವೇದಿಕೆಗಳಲ್ಲಿ ಕಾಣಿಸಿಕೊಳ್ತಾ ಇದ್ರು. ಪಕ್ಷದ ಥೀಮ್ ಕಲರ್​ಗೂ ತಾನು ಧರಿಸಿದ ಸೀರೆಗೂ ಮ್ಯಾಚಿಂಗ್ ಇರಲಿ ಅಂತಲೇ ಹಸಿರು ಸೀರೆಯನ್ನ ಧರಿಸ್ತಾ ಇದ್ರಂತೆ. ಇಂಥದ್ದೊಂದು ಸನ್ನಿ ಕರುಣಾನಿಧಿ ಅವರಿಗೂ ಇತ್ತಂತೆ. ಕರುಣಾನಿಧಿಯವರ ಡಿಎಂಕೆ ಪಕ್ಷದ ಚಿಹ್ನೆ ಉದಯವಾಗ್ತಿರೋ ಸೂರ್ಯ. ಸೂರ್ಯ ಉದಯಿಸುವಾಗ ಹಳದಿ ಬಣ್ಣದಲ್ಲಿರುತ್ತೆ ಅನ್ನೋದು ಹಲವರ ನಂಬಿಕೆ. ಹೀಗಾಗಿ ಹಳದಿ ಬಣ್ಣಕ್ಕೆ ತಮ್ಮ ವಸ್ತ್ರವೂ ಹೋಲಿಕೆಯಾಗಬೇಕು ಅನ್ನೋ ಕಾರಣಕ್ಕೆ ಕರುಣಾನಿಧಿ ಹಳದಿ ಶಾಲನ್ನ ಧರಿಸ್ತಾ ಇದ್ದರಂತೆ.

ಜೀವನಪೂರ್ತಿ ಕಪ್ಪುಬಟ್ಟೆಯನ್ನೇ ಧರಿಸ್ತೇನೆ ಅಂದಿದ್ರಾ ಕರುಣಾನಿಧಿ?

ಕರುಣಾನಿಧಿ ಅಧಿಕಾರ ಕಳೆದುಕೊಂಡು ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾದಾಗ ಕರುಣಾನಿಧಿ ದೊಡ್ಡ ಮಟ್ಟದ ವಿರೋಧ ವ್ಯಕ್ತಪಡಿಸಿದ್ರು. ಜಯಲಲಿತಾರಿಂದ ತಮಿಳುನಾಡಿನ ಜನತೆಗೆ ಮೋಸ ಆಗ್ತಿದೆ, ಅವರು ಉತ್ತಮ ಆಡಳಿತ ಕೊಡುವಲ್ಲಿ ಸೋತಿದ್ದಾರೆ ಅಂತೆಲ್ಲ ಪಾಂಪ್ಲೆಟ್​ಗಳನ್ನ ಮುದ್ರಿಸಿ ಮನೆಮನೆಗೂ ಹಂಚಿಸುವ ಕೆಲಸ ಮಾಡಿಸಿದ್ರು. ಕಪ್ಪು ಬಟ್ಟೆ ತೊಟ್ಟು ವಿರೋಧ ವ್ಯಕ್ತಪಡಿಸಿದ್ದ ಕರುಣಾನಿಧಿ ಪ್ರತೀಕಾರವಾಗಿ ಜೀವಿತಾವಧಿ ಇರುವವರೆಗೂ ಕಪ್ಪುಬಟ್ಟೆಯನ್ನೇ ಧರಿಸ್ತೇನೆ ಅಂತಲೂ ಶಪಥ ಮಾಡಿದ್ರು.

ಪ್ರಧಾನಮಂತ್ರಿ ತಮಿಳುನಾಡಿಗೆ ಬಂದಾಗಲೂ ಕಪ್ಪುವಸ್ತ್ರ ಧರಿಸಿದ್ದ ಕರುಣಾನಿಧಿ!

ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ಒಮ್ಮೆ ತಮಿಳುನಾಡಿಗೆ ಭೇಟಿಕೊಟ್ಟಿದ್ರು. ದ್ರಾವಿಡರ ನಾಡಿಗೆ ಪ್ರಧಾನಿ ಬರ್ತಾರೆ ಅಂದಾಗ ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ವಿರೋಧವೂ ಕೂಡ ವ್ಯಕ್ತವಾಗಿತ್ತು. ಸ್ವತಃ ಕರುಣಾನಿಧಿ ಪ್ರಧಾನಿ ಆಗಮನವನ್ನ ನಿರಾಕರಿಸಿದ್ರು. ಸಾಂಕೇತಿಕವಾಗಿ ಕಪ್ಪುಬಟ್ಟೆ ತೊಟ್ಟು ಪ್ರತಿರೋಧ ವ್ಯಕ್ತಪಡಿಸಿದ್ರು. ಹೀಗೆ ಕರುಣಾನಿಧಿಯ ರಾಜಕೀಯ ಬದುಕು ವರ್ಣರಂಜಿತ ಅನ್ನಿಸಿಕೊಂಡಿತ್ತು. ಆದ್ರೀಗ ಕರುಣಾನಿಧಿ ಅನ್ನೋ ರಾಜಕೀಯ ಧುರೀಣ ಇನ್ನೇನಿದ್ರೂ ಪ್ರತಿಮೆಯಷ್ಟೇ.

ವ್ಹೀಲ್ ಚೇರ್ ಮೇಲೆ ಹತ್ತೊಂಬತ್ತು ವರ್ಷಗಳನ್ನ ಕಳೆದ, ಅಲ್ಲಿಯೇ ಕೂತು ರಾಜಕಾರಣ ಮಾಡಿದ, ತಮಿಳರು ಎಂದಿಗೂ ಮರೆಯದಂಥ ಬಹುದೊಡ್ಡ ವ್ಯಕ್ತಿಯಾಗಿ ಬೆಳೆದ, ತನ್ನಿಡೀ ರಾಜಕೀಯ ಬದುಕನ್ನ ವರ್ಣರಂಜಿತವಾಗಿ ಮೆರೆಸಿದ ಕರುಣಾನಿಧಿ ಅವರು ಇಹಲೋಕ ತ್ಯಜಿಸಿ ಎಲ್ಲದಕ್ಕೂ ಅಂತ್ಯವಾಡಿದ್ದಾರೆ. ಪ್ರಖರ ರಾಜಕಾರಣಿ, ದ್ರಾವಿಡ ಚಳುವಳಿಕಾರನನ್ನ ಕಳೆದುಕೊಂಡ ತಮಿಳುನಾಡು ಮತ್ತೊಮ್ಮೆ ಕರುಣಾನಿಧಿ ಹುಟ್ಟಿಬರಲಿ ಅಂತ ದೇವರಲ್ಲಿ ಮೊರೆ ಹೋಗ್ತಿದ್ದಾರೆ. ಸಾವು ಎಂಥ ಅಬ್ಬರವನ್ನೂ ತಣ್ಣಗಾಗಿಸಿಬಿಡುತ್ತೆ ಅನ್ನೋದಕ್ಕೆ ಕರುಣಾನಿಧಿಯ ಸಾವು ಬೆಸ್ಟ್ ಎಕ್ಸಾಂಪಲ್.

Comments are closed.