ರಾಷ್ಟ್ರೀಯ

ಜಾರ್ಖಂಡ್‌ನ ಕುಗ್ರಾಮದಿಂದ ಬ್ಯಾಂಕ್‌ ಖಾತೆಗೆ ಕನ್ನ!

Pinterest LinkedIn Tumblr


ಹೊಸದಿಲ್ಲಿ: ಬ್ಯಾಂಕ್‌ನ ಕಾಲ್‌ಸೆಂಟರ್‌ನಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ ಹಣ ಲೂಟಿ ಮಾಡುತ್ತಿದ್ದ ಜಾರ್ಖಂಡ್‌ನ ವಂಚನಾ ಜಾಲವನ್ನು ಪೊಲೀಸರು ಬಂಧಿಸಿದ್ದಾರೆ.

ಏಳು ಮಂದಿಯನ್ನು ಬಂಧಿಸುವ ಮೂಲಕ ದೇಶಾದ್ಯಂತ ಬ್ಯಾಂಕ್‌ನಿಂದ ಹಣ ಎಗರಿಸುತ್ತಿದ್ದವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಜಾರ್ಖಂಡ್‌ನ ಜಮ್ತಾರದಲ್ಲಿ ಗುಂಪಿನ ಪ್ರಮುಖರಿದ್ದು, ಪಂಜಾಬ್‌ನಲ್ಲೂ ಕೆಲ ಪ್ರತಿನಿಧಿಗಳಿದ್ದಾರೆ ಎಂದು ತಿಳಿದು ಬಂದಿದೆ.

ಡೆಬಿಟ್‌ ಕಾರ್ಡುಗಳನ್ನು ಹೊಸ ಕಾರ್ಡಿಗೆ ಬದಲಾಯಿಸಿಕೊಳ್ಳುವಂತೆ ಬ್ಯಾಂಕ್‌ ಸಿಬ್ಬಂದಿ ಕರೆ ಮಾಡಿದ ಬಳಿಕ, ಅನೇಕರು ಅಕೌಂಟ್‌ನಲ್ಲಿದ್ದ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೈಬರ್‌ ಕ್ರೈಂ ಪೊಲೀಸರು ನಿಗಾ ಇರಿದ್ದರು. ಅಲ್ಲದೆ ದೂರುಗಳೂ ದಾಖಲಾಗಿದ್ದವು.

ಪ್ರಕರಣ ಸಂಬಂಧ ಮೊಬೈಲ್‌ ನಂಬರ್‌ ಒಂದನ್ನು ಟ್ರೇಸ್‌ ಮಾಡಿದ ಪೊಲೀಸರು, ಮಜೇರ್, ವರಿಂದರ್‌ ಹಾಗೂ ಅಭಿಷೇಕ್‌ ಎಂಬವರನ್ನು ಪಂಜಾಬ್‌ನಲ್ಲಿ ಬಂಧಿಸಿದ್ದಾರೆ.

ವಿಚಾರಣೆ ವೇಳೆ ಕಾಲ್‌ ಸೆಂಟರ್‌ ಜಾರ್ಖಂಡ್‌ನಲ್ಲಿದ್ದು, ನಾವು ಸಿಕ್ಕಿದ ಹಣವನ್ನು ಮಷೀನ್‌ ಮೂಲಕ ಬ್ಯಾಂಕ್‌ ಖಾತೆಯೊಂದಕ್ಕೆ ಹಾಕುತ್ತಿರುವುದಾಗಿ ಆರೋಪಿಗಳು ಹೇಳಿದ್ದಾರೆ.

ಆರೋಪಿಗಳ ಹೇಳಿಕೆ ಆಧರಿಸಿ, ಜಮ್‌ತಾರದಲ್ಲಿದ್ದ ಮಂದಲ್‌ ಹಾಗೂ ಆತನ ಸಹಚರರನ್ನು ಬಂಧಿಸಿದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ದಿಲ್ಲಿ ಮುಂಬಯಿ, ಚಂಡೀಗಡ ಹಾಗೂ ಬೆಂಗಳೂರಿನಿಂದ ಹಣ ಎಗರಿಸುತ್ತಿರುವುದಾಗಿ ಹೇಳಿದ್ದಾರೆ.

ಆನ್‌ಲೈನ್‌ ವ್ಯಾಲೆಟ್‌ಗೆ ಹಣ ವರ್ಗಾವಣೆ

ವಂಚಿಸಿ ಪಡೆದ ಹಣವನ್ನು ನಕಲಿ ಸಿಮ್‌ಕಾರ್ಡ್‌ನ ಮೂಲಕ ತೆರೆಯಲಾಗಿರುವ ಆನ್‌ಲೈನ್‌ ವ್ಯಾಲೆಟ್‌ಗಳಿಗೆ ಹಾಕಲಾಗುತ್ತದೆ. 2015ರಿಂದ ಗುಂಪು ಸಾರ್ವಜನಿಕರ ಹಣ ಎಗರಿಸುತ್ತಿರುವುದು ಬೆಳಕಿಗೆ ಬಂದಿದೆ. ನಕಲಿ ವಿಳಾಸ, ಗುರುತಿನ ಚೀಟಿ ನೀಡಿ ಸಿಮ್‌ಕಾರ್ಡ್‌ ಖರೀದಿಸಿ, ಆ ನಂಬರ್‌ನ್ನು ಮೊಬೈಲ್‌ ವ್ಯಾಲೆಟ್‌ಗಳಿಗೆ ಜೋಡಿಸಲಾಗುತ್ತಿತ್ತು. ಹೀಗಾಗಿ ಯಾವುದೇ ಅನುಮಾನ ಬಾರದ ರೀತಿಯಲ್ಲಿ ವ್ಯವಹಾರ ಮಾಡಲಾಗುತ್ತಿತ್ತು ಎಂದು ಗೊತ್ತಾಗಿದೆ. ಮಂದಲ್‌ ಈ ಹಿಂದೆ ಕಾನ್ಪುರದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧ ವಿಭಾಗದ ಡಿಸಿಪಿ ಭಿಷಮ್‌ ಸಿಂಗ್‌ ನೇತೃತ್ವದಲ್ಲಿ ಸೈಬರ್‌ ಸೆಲ್‌ ಕಾರ್ಯಚರಣೆ ನಡೆಸಿದ್ದಾಗಿ ಅಪರಾಧ ವಿಭಾಗದ ಎಸಿಪಿ ಡಾ. ಎ ಕೆ ಸಿಂಗ್ಲ ಹೇಳಿದ್ದಾರೆ.

Comments are closed.