ರಾಷ್ಟ್ರೀಯ

ಲಂಚ ಕೊಟ್ಟವರಿಗೂ ಜೈಲು: ಹೊಸ ಕಾಯಿದೆ ಜಾರಿ

Pinterest LinkedIn Tumblr


ಹೊಸದಿಲ್ಲಿ: ದೇಶಾದ್ಯಂತ ಇನ್ನು ಮುಂದೆ ಲಂಚ ಸ್ವೀಕಾರ ಮಾತ್ರವಲ್ಲ ಲಂಚ ಕೊಡುವುದೂ, ಲಂಚದ ಆಮಿಷ ಒಡ್ಡುವುದು ಸಹ ಶಿಕ್ಷಾರ್ಹ ಅಪರಾಧವಾಗಲಿದೆ. ಲಂಚ ನೀಡಿದವರಿಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ಜತೆಗೆ ದಂಡ ಬೀಳಲಿದೆ.

ದೇಶಾದ್ಯಂತ ಸರಕಾರಿ ಕಚೇರಿಗಳಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಕಾರ ಮಂಡಿಸಿದ ‘ಭ್ರಷ್ಟಾಚಾರ ತಡೆ (ತಿದ್ದುಪಡಿ) ವಿಧೇಯಕ -1988’ಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅಂಕಿತ ಹಾಕಿದ್ದು, ಜು.26ರಿಂದಲೇ ಅನ್ವಯವಾಗುವಂತೆ ಕಠಿಣ ಕಾನೂನು ದೇಶಾದ್ಯಂತ ಜಾರಿಗೆ ಬಂದಿದೆ.

ಶಿಕ್ಷೆ ಪ್ರಮಾಣ ಏರಿಕೆ: ಪರಿಷ್ಕೃತ ಕಾಯಿದೆಯಲ್ಲಿ ಲಂಚ ಪಡೆದ ಆರೋಪಿಯ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಕನಿಷ್ಠ 3 ವರ್ಷ ಜೈಲು ಶಿಕ್ಷೆ ಬೀಳಲಿದೆ. ಸೆರೆವಾಸವನ್ನು 7 ವರ್ಷಕ್ಕೆ ವಿಸ್ತರಿಸಲೂ ಅವಕಾಶವಿದೆ.

ವಾಣಿಜ್ಯ ಸಂಘಟನೆಗಳಿಗೂ ಬಿಸಿ: ಹೊಸ ಕಾಯಿದೆಯು ವಾಣಿಜ್ಯ ಸಂಘಟನೆಗಳಿಗೂ ಅನ್ವಯಿಸಲಿದೆ. ಅಂದರೆ ಯಾವುದೇ ವಾಣಿಜ್ಯ ಸಂಘಟನೆಗೆ ಸಂಬಂಧಿಸಿದ ವ್ಯಕ್ತಿ, ಸರಕಾರಿ ಉದ್ಯೋಗಿಗೆ ಲಂಚ ಕೊಟ್ಟರೆ ಅಥವಾ ಲಂಚ ನೀಡುವ ಆಮಿಷವನ್ನು ಒಡ್ಡಿದರೆ, ಅಂತಹ ಸಂಘಟನೆಯನ್ನೇ ತಪ್ಪಿತಸ್ಥ ಎಂದು ಗುರುತಿಸಿ ಕ್ರಮ ಜರುಗಿಸಲು ಅವಕಾಶವಿದೆ.

ಸುಮಾರು 30 ವರ್ಷಗಳ ಹಳೆಯ ಕಾಯಿದೆಯಲ್ಲಿ ಲಂಚ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಉತ್ತೇಜಿಸುವವರ ವಿರುದ್ಧ ಕ್ರಮಕ್ಕೆ ಯಾವುದೇ ನಿಯಮಗಳಿರಲಿಲ್ಲ.

2 ವರ್ಷ ಡೆಡ್‌ಲೈನ್‌

ಯಾವುದೇ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು 2 ವರ್ಷದ ಕಾಲಮಿತಿಯಲ್ಲಿ ಮುಗಿಸಲು ಹೊಸ ಕಾಯಿದೆಯಲ್ಲಿ ಗಡುವು ವಿಧಿಸಲಾಗಿದೆ.

ಅಮಾಯಕರಿಗೆ ರಕ್ಷಣೆ

ಹೊಸ ಕಾಯಿದೆ ಪ್ರಕಾರ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧ ಪೊಲೀಸರು, ಸಿಬಿಐ ಅಥವಾ ತನಿಖಾ ಸಂಸ್ಥೆಗಳು ಶಂಕೆಯ ಮೇರೆಗೆ ಏಕಾಏಕಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ. ತನಿಖೆ ನಡೆಸುವ ಮುನ್ನ ಸಂಬಂಧಪಟ್ಟ ಮೇಲಾಧಿಕಾರಿಗಳು ಅಥವಾ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಗುಮಾನಿ ಮೇರೆಗೆ ಅಮಾಯಕರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿ ಶೋಷಿಸುವುದನ್ನು ತಡೆಯಲು ಈ ನಿಯಮ ಸೇರಿಸಲಾಗಿದೆ. ನಿವೃತ್ತ ಅಧಿಕಾರಿಗಳಿಗೂ ಹೊಸ ನಿಯಮ ಅನ್ವಯವಾಗಲಿದೆ. ಆದರೆ, ರೆಡ್‌ ಹ್ಯಾಂಡೆಡ್‌ ಆಗಿ ಸಿಕ್ಕಿಬಿದ್ದ ಪ್ರಕರಣಗಳಲ್ಲಿ ಪೂರ್ವಾನುಮತಿ ನಿಯಮ ಅನ್ವಯಿಸುವುದಿಲ್ಲ.

Comments are closed.