ಅಂತರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ಹಾದಿ ತುಳಿಯಲಿರುವ ಇಮ್ರಾನ್ ಖಾನ್

Pinterest LinkedIn Tumblr


ಲಾಹೋರ್: 2014ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಂದಿನ ಪಾಕ್ ಪ್ರಧಾನಿ ಸೇರಿದಂತೆ ಹಲವರನ್ನು ಆಹ್ವಾನಿಸಿದ್ದರು. ಪಾಕ್ ಪ್ರಧಾನಿಗೆ ಆಹ್ವಾನ ಕೊಟ್ಟಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈಗ 2018ರಲ್ಲಿ ಭಾರತದ ಪ್ರಧಾನಿಯನ್ನು ಆಹ್ವಾನಿಸುವ ಸರದಿ ಪಾಕ್ ಪ್ರಧಾನಿಯದ್ದಾಗಿದೆ. ಚುನಾವಣೆ ಜಯಿಸಿ ಅಧಿಕಾರ ಹಿಡಿಯಲಿರುವ ಇಮ್ರಾನ್ ಖಾನ್ ಅವರು ಆಗಸ್ಟ್ 11ರಂದು ನಡೆಯುವ ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನರೇಂದ್ರ ಮೋದಿಗೆ ಆಹ್ವಾನ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮೋದಿ ಸೇರಿದಂತೆ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರಿಗೆ ಇನ್ವಿಟೇಷನ್ ಕಳುಹಿಸುವ ಚಿಂತನೆ ನಡೆದಿದೆ.

ಪಾಕ್ ಚುನಾವಣೆಯಲ್ಲಿ ಜಯ ಗಳಿಸಿದ ಇಮ್ರಾನ್ ಖಾನ್ ಅವರಿಗೆ ನರೇಂದ್ರ ಮೋದಿ ಅವರೇ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದ್ದರು. ಸದಾ ಬಿಕ್ಕಟ್ಟಿನಿಂದ ಕೂಡಿರುವ ಎರಡೂ ದೇಶಗಳ ಸಂಬಂಧಕ್ಕೆ ಇಮ್ರಾನ್ ಖಾನ್ ಅವರಿಂದ ಪುಷ್ಟಿ ಸಿಗಬಹುದೆಂದು ಮೋದಿ ಆಶಿಸಿದ್ದರು. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ್ದ ಇಮ್ರಾನ್ ಖಾನ್ ಕೂಡ ಭಾರತ ಮತ್ತು ಪಾಕ್ ಸಂಬಂಧವೃದ್ಧಿಗೆ ಆದ್ಯತೆ ಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಬಿಕ್ಕಟ್ಟು ಬಗೆಹರಿಸುವ ಬದಲು ಯುದ್ಧ ಮತ್ತು ರಕ್ತಪಾತ ಮಾಡುತ್ತಾ ಕೂತರೆ ಅದು ದೊಡ್ಡ ದುರಂತವಾದೀತು. ಶಾಂತಿ ಸ್ಥಾಪನೆಯತ್ತ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ಪಾಕಿಸ್ತಾನ ಕೂಡ ಒಂದು ಹೆಜ್ಜೆ ಮುಂದಿಕ್ಕುತ್ತದೆ ಎಂದು ಹೇಳುವ ಮೂಲಕ ಇಮ್ರಾನ್ ಖಾನ್ ಶಾಂತಿ ಮಂತ್ರ ಪಠಿಸಿದ್ದಾರೆ.

ಜುಲೈ 25ರಂದು ನಡೆದ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕೀ ಇನ್ಸಾಫ್ ಪಕ್ಷವು ಬಹುಮತ ಪಡೆಯಲು ವಿಫಲವಾದರೂ ಅಗ್ರಗಣ್ಯ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷೇತರರು ಹಾಗೂ ಸಣ್ಣಪುಟ್ಟ ಪಕ್ಷಗಳ ಸಹಾಯದೊಂದಿಗೆ ಅವರು ಸರಕಾರ ರಚಿಸುವ ಸಾಧ್ಯತೆ ಇದೆ. ಆ. 11ರಂದು ಇಮ್ರಾನ್ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅದಾದ ನಂತರ ಅವರು ವಿಶ್ವಾಸ ಮತ ಯಾಚಿಸಿ ಬಹುಮತ ಸಾಬೀತಪಡಿಸಬೇಕಾಗುತ್ತದೆ.

Comments are closed.