ರಾಷ್ಟ್ರೀಯ

ಜು.27ಕ್ಕೆ ಚಂದ್ರಗ್ರಹಣ: ಕೆಂಪುಬಣ್ಣದಿಂದ ಕಾಣಲಿದ್ದಾನೆ ಚಂದ್ರ

Pinterest LinkedIn Tumblr

ಬೆಂಗಳೂರು: ದೀರ್ಘಾವಧಿಯದ್ದು ಎನ್ನಲಾಗುತ್ತಿರುವ ಚಂದ್ರಗ್ರಹಣವು ಜು.27 ರ ಮಧ್ಯರಾತ್ರಿ ನಡೆಯಲಿದೆ. ವಿಶೇಷವೆಂದರೆ, ಇದೇ ಸಮಯದಲ್ಲಿ ಮಂಗಳ ಗ್ರಹವು ಚಂದ್ರನ ಸಮೀಪ ಬರಲಿದೆ.

ಸಾಮಾನ್ಯವಾಗಿ ಚಂದ್ರಗ್ರಹಣ ಮೂರರಿಂದ ನಾಲ್ಕು ಗಂಟೆಗಳ ಅವಧಿಯದ್ದಾಗಿರುತ್ತದೆ. ಹಿಂದಿನ ಚಂದ್ರಗ್ರಹಣಗಳಿಗೆ ಹೋಲಿಸಿದರೆ ಈ ಬಾರಿಯ ಚಂದ್ರಗ್ರಹಣ ಸ್ವಲ್ಪ ಹೆಚ್ಚು ನಿಮಿಷ ಕಾಣಿಸಲಿದೆ. ಇದನ್ನು ದೀರ್ಘಾವಧಿಯ ಚಂದ್ರಗ್ರಹಣವೆಂದು ಗುರುತಿಸಲಾಗಿದೆ. ಭೂಮಿಯ ನೆರಳು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿಕೊಂಡ ಬಳಿಕ ಚಂದ್ರನ ಬಣ್ಣ ನಸುಗೆಂಪು ಬಣ್ಣಕ್ಕೆ ತಿರುಗಲಿದೆ. ಜ. 31 ರಂದು ಚಂದ್ರಗ್ರಹಣವಾಗಿದ್ದಾಗ ಇದೇ ರೀತಿ ಕಂಡುಬಂದಿತ್ತು. ಅಂದಿನ ಚಂದ್ರನನ್ನು ‘ಸೂಪರ್‌ಬ್ಲಡ್‌ಮೂನ್‌’ ಎಂದು ಕರೆದರೆ, ಈ ಬಾರಿ ಗ್ರಹಣಕ್ಕೊಳಗಾಗುತ್ತಿರುವ ಚಂದ್ರನಿಗೆ ‘ಬ್ಲಡ್‌ಮೂನ್‌’ ಎಂದು ಹೆಸರಿಸಲಾಗಿದೆ.

ಮಂಗಳ ಗ್ರಹವೂ ಚಂದ್ರನ ಸಮೀಪಕ್ಕೆ ಬರಲಿರುವುದು ಈ ಬಾರಿಯ ಚಂದ್ರಗ್ರಹಣದ ವಿಶೇಷ. ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲೇ ನೋಡಲು ಸಾಧ್ಯವಿದೆ. ಜತೆಗೆ ಸಮೀಪದಲ್ಲೇ ಬರುವ ಮಂಗಳ ಗ್ರಹವನ್ನೂ ನೋಡಬಹುದು.

ಸಮಯ
ಜವಹರಲಾಲ್‌ನೆಹರು ತಾರಾಲಯದ ಮಾಹಿತಿಯಂತೆ, ಜು.27 ರಂದು ಮಧ್ಯರಾತ್ರಿ 11.54 ಗಂಟೆಗೆ ಚಂದ್ರಗ್ರಹಣ ಆರಂಭವಾಗಲಿದೆ. ಶುಭ್ರ ಆಕಾಶವಿದ್ದರೆ ಚಂದ್ರಗ್ರಹಣವನ್ನು ಸುಲಭವಾಗಿ ವೀಕ್ಷಿಸಬಹುದು. ರಾತ್ರಿ 1 ಗಂಟೆಗೆ ಭೂಮಿಯ ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸಿ ಕೆಂಪಾಗಿಸಲಿದೆ. ನಂತರ 2.43 ಗಂಟೆವರೆಗೂ ಇದೇ ರೀತಿ ಗ್ರಹಣದ ಪೂರ್ಣ ಸ್ಥಿತಿ ಇರಲಿದೆ. ಬಳಿಕ ನೆರಳು ಬಿಟ್ಟುಕೊಳ್ಳುತ್ತಾ ಗ್ರಹಣ ಮುಗಿಯಲಿದೆ. ರಾತ್ರಿ 3.49 ಗಂಟೆಗೆ ಗ್ರಹಣ ಸಂಪೂರ್ಣವಾಗಿ ಬಿಡಲಿದೆ.

ಪ್ರತಿ ವರ್ಷ ನಡೆಯುವ ಚಂದ್ರಗ್ರಹಣಕ್ಕೆ ಹೋಲಿಸಿದರೆ ಈ ಚಂದ್ರಗ್ರಹಣವು ಕೆಲ ನಿಮಿಷಗಳ ಕಾಲ ಹೆಚ್ಚಾಗಿರಲಿದೆ ಎಂದು ನೆಹರು ತಾರಾಲಯದ ನಿರ್ದೇಶಕ ಪ್ರಮೋದ್‌ಜಿ.ಗಲಗಲಿ ತಿಳಿಸಿದ್ದಾರೆ.

ಬೆಂಗಳೂರಿನ ತಾರಾಲಯದಲ್ಲಿ ಚಂದ್ರನನ್ನು ಸಮೀಪದಲ್ಲಿ ನೋಡಲು ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಗ್ರಹಣ ಮಾಹಿತಿ
ದಿನ: ಜು.27 ರಂದು,
ಆರಂಭ: ಮಧ್ಯರಾತ್ರಿ 11.54ಗೆ,
ಕೆಂಪಗೆ ಕಾಣುವುದು: ರಾತ್ರಿ 1 ಗಂಟೆ,
ಸಂಪೂರ್ಣ ಸ್ಥಿತಿ: 2.43 ಗಂಟೆವರೆಗೂ,
ಅಂತ್ಯ: 3.49 ಗಂಟೆಗೆ,
ಒಟ್ಟಾರೆ ಗ್ರಹಣದ ಕಾಲಾವಧಿ: 4ಗಂಟೆ(1.43 ನಿಮಿಷ ಕೆಂಪುಬಣ್ಣದಿಂದ ಕಾಣಲಿದೆ).

Comments are closed.