ರಾಷ್ಟ್ರೀಯ

ಬಿಜೆಪಿ ದೇಶದಲ್ಲಿ ತಾಲಿಬಾನ್ ಹಿಂದೂ ಧರ್ಮ, ತಾಲಿಬಾನ್ ಕೋಮುವಾದವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ: ಮಮತಾ ಬ್ಯಾನರ್ಜಿ ಆರೋಪ

Pinterest LinkedIn Tumblr

ಕೋಲ್ಕತ್ತಾ; ಬಿಜೆಪಿ ದೇಶದಲ್ಲಿ ತಾಲಿಬಾನ್ ಹಿಂದೂ ಧರ್ಮ ಮತ್ತು ತಾಲಿಬಾನ್ ಕೋಮುವಾದವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇದಕ್ಕಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕೆಂದು ಹೇಳಿದ್ದಾರೆ.

ರಾಜಸ್ತಾನದ ಅಲ್ವರ್ ಜಿಲ್ಲೆಯಲ್ಲಿ 28 ವರ್ಷದ ಅಕ್ಬರ್ ಖಾನ್ ಎಂಬ ಯುವಕ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂಬ ಸಂಶಯದ ಮೇಲೆ ಸಾಮೂಹಿಕ ಹತ್ಯೆ ಮಾಡಿರುವ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಕೇಸರಿ ಪಕ್ಷ ಬಿಜೆಪಿ ದೇಶದಲ್ಲಿ ತಾನಿಬಾನ್ ಕೋಮುವಾದ ಮತ್ತು ತಾಲಿಬಾನ್ ಹಿಂಸೆಯ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕೋಲ್ಕತ್ತಾದ ಎಸ್ಪ್ಲನಾಡೆ ಎಂಬಲ್ಲಿ 25ನೇ ವಾರ್ಷಿಕ ಹುತಾತ್ಮ ದಿನದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ತಾಲಿಬಾನ್ ಹಿಂದೂಧರ್ಮ ಮತ್ತು ಶಸ್ತ್ರಾಸ್ತ್ರಗಳಿಂದ ತುಂಬಿದ ಹಿಂದೂ ಧರ್ಮದ ಬಗ್ಗೆ ನಮಗೆ ನಂಬಿಕೆಯಿಲ್ಲ. ಸ್ವಾಮಿ ವಿವೇಕಾನಂದರು ಮತ್ತು ಶ್ರೀ ರಾಮಕೃಷ್ಣ ಪರಮಹಂಸರು ಬೋಧಿಸಿದ ಹಿಂದೂ ಧರ್ಮದ ಮೇಲೆ ನಮಗೆ ನಂಬಿಕೆಯಿರುವುದು. ಇಂದು ನಮ್ಮ ದೇಶವನ್ನು ಆಳುತ್ತಿರುವ ಬಿಜೆಪಿಯವರ ಕೈಯಲ್ಲಿ ರಕ್ತಪಾತ ಹರಿಯುತ್ತಿದೆ ಎಂದು ಟೀಕಿಸಿದರು.

ಬಿಜೆಪಿಯನ್ನು ಓಡಿಸಿ, ದೇಶ ರಕ್ಷಿಸಿ ಎಂಬ ಸಾಮೂಹಿಕ ರ್ಯಾಲಿಗೆ ಕರೆ ನೀಡಿದ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ರಾಜ್ಯದಲ್ಲಿ 42 ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ಪ್ರತಿದಿನ ದೇಶದ ಒಂದಿಲ್ಲೊಂದು ಭಾಗದಲ್ಲಿ ಜನರ ಸಾಮೂಹಿಕ ಹತ್ಯೆಯಾಗುತ್ತಿದೆ. ಇಂದು ಕೂಡ ಒಬ್ಬರನ್ನು ಹತ್ಯೆ ಮಾಡಲಾಗಿದೆ. ಬಿಜೆಪಿಯವರು ಧಾರ್ಮಿಕ ಭಯೋತ್ಪಾದನೆ ಮಾಡುತ್ತಿದ್ದಾರೆ. ಸಾಮೂಹಿಕ ಹತ್ಯೆಗೆ ರಾಜ್ಯಗಳಿಗೆ ಉಪದೇಶ ಮಾಡುವ ಮೊದಲು ಕೇಂದ್ರ ಸರ್ಕಾರ ತಮ್ಮ ನಾಯಕರಿಗೆ ಸರಿಯಾಗಿ ವರ್ತಿಸುವಂತೆ ಹೇಳಲಿ ಎಂದರು.

ಬಿಜೆಪಿ-ಆರ್ ಎಸ್ ಎಸ್ ಹಳೆ ನಾಯಕರ ಬಗ್ಗೆ ನನಗೆ ಈಗಲೂ ಗೌರವವಿದೆ, ಅವರು ಕೊಳಕು ಆಟ ಆಡುತ್ತಿರಲಿಲ್ಲ. ಆದರೆ ಇಂದಿನ ನಾಯಕರು ಹಾಗಿಲ್ಲ. ಮುಂದಿನ ಸಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಲು ತೃತೀಯ ರಂಗ ರಚಿಸಲಾಗುವುದು ಎಂದು ಹೇಳಿದರು.

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಪ್ರಧಾನಿಯಾಗುವ ಕನಸು ಕಾಣಬೇಡಿ ಮಮತಾ ಬ್ಯಾನರ್ಜಿಯವರೇ ನೀವು ಎಂದಿಗೂ ಪ್ರಧಾನಿಯಾಗುವುದಿಲ್ಲ ಎಂದಿದೆ.

ಪಶ್ಚಿಮ ಬಂಗಾಳದಲ್ಲಿಯೇ ಲೋಕಸಭೆ ಚುನಾವಣೆಯಲ್ಲಿ ಸ್ಥಾನಗಳನ್ನು ಟಿಎಂಸಿ ಪಡೆಯುತ್ತದೆಯೇ ಇಲ್ಲವೇ ಎಂಬ ಸಂಶಯವಿದೆ, ಅಂತಹುದರಲ್ಲಿ ಅವರು ದೆಹಲಿಯ ಸಂಸತ್ತಿನಲ್ಲಿ ಕುಳಿತು ಅಧಿಕಾರ ಮಾಡಲು ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ ಲೇವಡಿ ಮಾಡಿದ್ದಾರೆ.

Comments are closed.