ರಾಷ್ಟ್ರೀಯ

ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ: ವಿಧೇಯಕ ಮಂಡನೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ

Pinterest LinkedIn Tumblr


ಹೊಸದಿಲ್ಲಿ: ಹನ್ನೆರಡು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ನೀಡುವ ವಿಧೇಯಕ ಈ ಬಾರಿಯ ಸಂಸತ್‌ ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ತೀರ್ಮಾನಕ್ಕೆ ಅನುಮೋದನೆ ದೊರೆತಿದೆ ಎಂದು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಪ್ರಸ್ತಾವಿತ ‘ಕ್ರಿಮಿನಲ್‌ ಕಾನೂನು (ತಿದ್ದುಪಡಿ) ವಿಧೇಯಕ-2018’ಕ್ಕೆ ಸಂಸತ್‌ ಅನುಮೋದನೆ ದೊರೆತ ಬಳಿಕ, ಕಳೆದ ಏಪ್ರಿಲ್‌ 21ರಂದು ಕಠುವಾ ಅತ್ಯಾಚಾರದ ಬಳಿಕ ಸರಕಾರ ಈ ಸಂಬಂಧ ಹೊರಡಿಸಿದ್ದ ಸುಗ್ರೀವಾಜ್ಞೆಯ ಸ್ಥಾನವನ್ನು ಅದು ತುಂಬಲಿದೆ.

ಗೃಹ ಸಚಿವಾಲಯ ಸಿದ್ಧಪಡಿಸಿದ ಕರಡು ವಿಧೇಯಕಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕಠಿಣ ಶಿಕ್ಷೆ: ಹೊಸ ವಿಧೇಯಕದ ಪ್ರಕಾರ, ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ವಯಸ್ಸು 16 ವರ್ಷಕ್ಕಿಂತಲೂ ಕಡಿಮೆ ಇದ್ದರೆ, ಅಂತಹ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣವನ್ನು 10ರಿಂದ 20 ವರ್ಷಕ್ಕೆ ಹೆಚ್ಚಿಸಲಾಗಿದೆ. ಸಂಪೂರ್ಣ ಜೀವಾವಧಿ ಶಿಕ್ಷೆಯನ್ನೂ ವಿಧಿಸಲು ಅವಕಾಶವಿದೆ.

ಒಂದು ವೇಳೆ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರೆ, ಅಂತಹ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಯಾಗಲಿದೆ.

12 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಕನಿಷ್ಠ 20 ವರ್ಷ ಜೈಲು ಶಿಕ್ಷೆ ಮತ್ತು ಗರಿಷ್ಠ ಶಿಕ್ಷೆಯಾಗಿ ಮರಣ ದಂಡನೆ ವಿಧಿಸಲು ಅವಕಾಶವಿದೆ.

ಸಂಪುಟ ಸಭೆಯ ಇತರ ತೀರ್ಮಾನಗಳು

* ಅರ್ಧ ಶಿಕ್ಷೆ ಅವಧಿಯನ್ನು ಪೂರೈಸಿದ 55 ವರ್ಷ ಮೇಲ್ಪಟ್ಟ ಮಹಿಳಾ ಕೈದಿಗಳು 60 ವರ್ಷ ಮೇಲ್ಪಟ್ಟ ಪುರುಷ ಕೈದಿಗಳನ್ನು ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನೋತ್ಸವದ ಅಂಗವಾಗಿ ಅ.2ರಂದು ಕ್ಷಮಾದಾನ ನೀಡಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಆದರೆ, ವರದಕ್ಷಣೆಗಾಗಿ ಕೊಲೆ, ಅತ್ಯಾಚಾರ, ಮಾನವ ಕಳ್ಳಸಾಗಣೆ, ಪೊಟಾ ಮತ್ತು ಟಾಡಾ ಕಾಯಿದೆ ಅಡಿ ಶಿಕ್ಷೆ ಎದುರಿಸುತ್ತಿರುವ ಅಪರಾಧಿಗಳಿಗೆ ಕ್ಷಮಾದಾನ ಸಿಗುವುದಿಲ್ಲ.

*ದತ್ತು ಸ್ವೀಕಾರಕ್ಕೆ ಸಮ್ಮತಿ ನೀಡುವ ಅಧಿಕಾರ ಕೋರ್ಟ್‌ಗಳ ಬದಲಿಗೆ

ಬಾಲ್ಯ ವಿವಾಹ ಅಮಾನ್ಯ

ಭವಿಷ್ಯದಲ್ಲಿ ನಡೆಯುವ ಎಲ್ಲಾ ಬಾಲ್ಯ ವಿವಾಹಗಳನ್ನೂ ಅಮಾನ್ಯ ಎಂದು ಪರಿಗಣಿಸುವ ಪ್ರಸ್ತಾವನೆಯೊಂದನ್ನು ಸಂಪುಟ ಸಭೆಯ ಮುಂದಿರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.

ಈ ಪ್ರಸ್ತಾವನೆಗೆ ಸಂಪುಟದ ಅನುಮೋದನೆ ದೊರೆತಲ್ಲಿ, ಬಾಲ್ಯ ವಿವಾಹ ನಿಷೇಧ ಸಂಬಂಧಿತ ಕಾಯಿದೆಗೆ ತಿದ್ದುಪಡಿ ತರಲಾಗುವುದು. ಪ್ರಸ್ತುತ, ಜಿಲ್ಲಾ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುವವರೆಗೂ ಬಾಲ್ಯ ವಿವಾಹ ಕಾನೂನು ಪ್ರಕಾರ ಅಸಿಂಧುವಾಗುವುದಿಲ್ಲ.

Comments are closed.