ರಾಷ್ಟ್ರೀಯ

ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದುಹಾಕಿದ ಬಿಜೆಪಿ ಕಾರ್ಯಕರ್ತರು

Pinterest LinkedIn Tumblr

ಪಾಕುರ್‌(ಜಾರ್ಖಂಡ್‌): ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ ಅವರ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಲ್ಲೆ ನಡೆಸಿ, ಬಟ್ಟೆ ಹರಿದಿರುವ ಘಟನೆ ಪಾಕುರ್‌ ಎಂಬಲ್ಲಿ ಮಂಗಳವಾರ ನಡೆದಿದೆ.

ಬಿಜೆಪಿ ಕಾರ್ಯಕರ್ತರ ಜೊತೆಗೆ ಆರ್‌ಎಸ್‌ಎಸ್‌ ಹಾಗೂ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರೂ ಸೇರಿ ದಾಳಿ ನಡೆಸಿದ್ದಾರೆ.

ಪಾಕುರ್‌ ಪ್ರದೇಶಕ್ಕೆ ಅಗ್ನಿವೇಶ್‌ ಭೇಟಿ ನೀಡುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಸ್ಥಳೀಯ ಬುಡಕಟ್ಟು ಜನರನ್ನು ಮತಾಂತರಗೊಳಿಸಲು ಕ್ರೈಸ್ತ ಮಿಷನರಿಗಳ ಪರವಾಗಿ ಪ್ರವಚನ ನೀಡಲು ಆಗಮಿಸಿದ್ದಾರೆ ಎಂದು ಆರೋಪಿಸಿ ಈ ದಾಳಿ ನಡೆಸಲಾಗಿದೆ’ ಎಂದು ದೈನಿಕ್‌ ಜಾಗರಣ್‌ ಸುದ್ದಿ ಪ್ರಕಟಿಸಿದೆ.

ಲಿಟ್ಟಿಪದಾದಲ್ಲಿ ನಡೆಯಲಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಅಗ್ನಿವೇಶ್‌ ಇಲ್ಲಿನ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದರು. ಹೋಟೆಲ್‌ ಎದುರು ಜಮಾಯಿಸಿದ್ದ ಕಾರ್ಯಕರ್ತರು ಬೆಳಗ್ಗಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದರು. ಅವರು ಹೋಟೆಲ್‌ನಿಂದ ಹೊರಬರುತ್ತಿದ್ದಂತೆ ಹಲ್ಲೆ ನಡೆಸಲಾಗಿದೆ.

ಅಗ್ನಿವೇಶ್‌ ಈ ಹಿಂದೆ ಗೋ ಮಾಂಸ ವಿಚಾರವಾಗಿಯೂ ಮಾತನಾಡಿದ್ದರು. ಅವರ ಹೇಳಿಕೆಯನ್ನು ಖಂಡಿಸಿದ್ದ ಬಲಪಂಥೀಯ ಸಂಘಟನೆಗಳು ‘ಸನಾತನ ಧರ್ಮ’(ಹಿಂದೂ ಧರ್ಮ) ವಿರೋಧಿ ಎಂದು ದೂರಿದ್ದವು.

ಅಗ್ನಿವೇಶ್‌ ಹರಿಯಾಣ ವಿಧಾನಸಭೆಯ ಮಾಜಿ ಸದಸ್ಯರೂ ಹೌದು. ಸದ್ಯ ರಾಜಕೀಯ ತ್ಯಜಿಸಿರುವ ಅವರು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸಿದ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿಯೂ ಭಾಗವಹಿಸಿದ್ದರು.

Comments are closed.