ರಾಷ್ಟ್ರೀಯ

ಆಂಧ್ರದಲ್ಲಿ 5 ರೂ.ಗೆ ಊಟ ನೀಡುವ `ಅಣ್ಣಾ ಕ್ಯಾಂಟೀನ್’ ಉದ್ಘಾಟನೆ

Pinterest LinkedIn Tumblr


ಅಮರಾವತಿ: ಕೇವಲ 5 ರೂಪಾಯಿಗೆ ಊಟ ಮತ್ತು ಉಪಹಾರ ವಿತರಿಸುವ `ಅಣ್ಣಾ ಕ್ಯಾಂಟೀನ್’ ಅನ್ನು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡುರವರು ವಿಜಯವಾಡದಲ್ಲಿ ಉದ್ಘಾಟಿಸಿದ್ದಾರೆ.

ಚಂದ್ರಬಾಬು ನಾಯ್ಡು ಅವರು ಇಂದು ವಿಜಯವಾಡದ ಭವಾನಿಪುರದಲ್ಲಿ ಅಣ್ಣಾ ಕ್ಯಾಂಟೀನ್ ಉದ್ಘಾಟಿಸಿದರು. ಇದಲ್ಲದೇ ರಾಜ್ಯಾದ್ಯಂತ ಒಟ್ಟು 60 ಕ್ಯಾಂಟೀನ್ ಗಳು ಇಂದು ಉದ್ಘಾಟನೆಗೊಂಡಿವೆ. ಈ ವೇಳೆ ಮಾತನಾಡಿದ ಅವರು ರಾಜ್ಯಾದ್ಯಂತ ಒಟ್ಟು 203 ಕ್ಯಾಂಟೀನ್ ಗಳನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.

ಆಂಧ್ರದ ಪುರಸಭೆ ಮತ್ತು ನಗರಾಭಿವೃದ್ಧಿ ಸಚಿವರಾದ ಪಿ ನಾರಾಯಣ್ ರವರು ಮಾತನಾಡಿ, ಬಡವರು ಕೇವಲ 15 ರೂಪಾಯಿಗಳಿಗೆ ದಿನದ ಮೂರು ಹೊತ್ತಿನ ಆಹಾರ ಪಡೆಯಬೇಕೆಂಬುದು `ಅಣ್ಣಾ ಕ್ಯಾಂಟೀನ್’ನ ಯೋಜನೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

ನೂತನವಾಗಿ ಉದ್ಘಾಟನೆಯಾಗಿರುವ ಈ ಕ್ಯಾಂಟೀನ್ ಗಳಲ್ಲಿ ಕೇವಲ 5 ರೂಪಾಯಿಗಳಿಗೆ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ನೀಡಲಾಗುತ್ತದೆ. ಬೆಳಿಗ್ಗೆ ಮೂರು ಇಡ್ಲಿ, ಮೂರು ಪೂರಿ, ಉಪ್ಪಿಟ್ಟು ಹಾಗೂ ಪೊಂಗಲ್ ಅನ್ನು ಉಪಹಾರವಾಗಿ ನೀಡಿದರೆ, ಮಧ್ಯಾಹ್ನ ಮತ್ತು ರಾತ್ರಿ ಭೋಜನಕ್ಕೆ ಅನ್ನ ಸಾಂಬಾರ್, ದಾಲ್, ಉಪ್ಪಿನಕಾಯಿ, ಕರ್ರಿ ಮತ್ತು ಮೊಸರು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಯೋಜನೆಯ ಉಸ್ತುವಾರಿಯನ್ನು ಅಕ್ಷಯಪಾತ್ರ ಪ್ರತಿಷ್ಠಾನಕ್ಕೆ ನೀಡಲಾಗಿದ್ದು, ದಿನನಿತ್ಯ 2 ಲಕ್ಷ ಮಂದಿಗೆ ಆಹಾರ ಪೂರೈಸುವ ಉದ್ದೇಶವನ್ನು `ಅಣ್ಣಾ ಕ್ಯಾಂಟೀನ್’ ಹೊಂದಿದೆ ಎಂದು ನಾರಾಯಣ್ ರವರು ಹೇಳಿದ್ದಾರೆ.

ಆರಂಭದಲ್ಲಿ ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಆರಂಭಗೊಂಡ ಬಳಿಕ ಕರ್ನಾಟಕದಲ್ಲಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು.

Comments are closed.