ರಾಷ್ಟ್ರೀಯ

ತ್ರಿಪುರ ಸುಂದರಿ ದೇವಾಲಯದಲ್ಲಿ ಕೆಜಿಗಟ್ಟಲೆ ಬಂಗಾರ!

Pinterest LinkedIn Tumblr


ಅಗರ್ತಲಾ: ಭಾರತದ ಪುರಾತನ ದೇವಸ್ಥಾನಗಳಲ್ಲಿ ಬಂಗಾರದ ಭಂಡಾರವೇ ಅಡಗಿರುತ್ತದೆ ಎನ್ನುವುದು ಹೊಸ ಸಂಗತಿಯಲ್ಲ. ಇದೀಗ ಈ ಸಾಲಿಗೆ ಮಗದೊಂದು ದೇವಸ್ಥಾನವೂ ಸೇರ್ಪಡೆಯಾಗಿದೆ. ತ್ರಿಪುರ ಸುಂದರಿ ದೇವಸ್ಥಾನದಲ್ಲಿ ಕೆಜಿಗಟ್ಟಲೆ ಬಂಗಾರ, ಬೆಳ್ಳಿಯ ರಾಶಿಯೇ ಸಿಕ್ಕಿದೆ.

ಹಿಂದೂ ಧರ್ಮದ 51 ಶಕ್ತಿಪೀಠಗಳಲ್ಲಿ ಗೋಮತಿಯ ತ್ರಿಪುರೇಶ್ವರಿಯೂ ಒಂದು.. ತ್ರಿಪುರದಲ್ಲಿರೋ 500 ವರ್ಷಗಳ ಇತಿಹಾಸದ ಈ ದೇಗುಲದ ಅಪಾರ ಸಂಪತ್ತು ಇದೀಗ ಬೆಳಕಿಗೆ ಬಂದಿದ್ದು, ದೇಶದ ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ತ್ರಿಪುರೇಶ್ವರಿಯೂ ಸೇರ್ಪಡೆಯಾಗಿದೆ. ಸುಮಾರು 69 ವರ್ಷಗಳ ಬಳಿಕ ಇಲ್ಲಿನ ಚಿನ್ನಾಭರಣಗಳನ್ನು ಲೆಕ್ಕಹಾಕಲಾಗುತ್ತಿದ್ದು, ಪುರಾತನ ಕಾಲದ ಬಂಗಾರದ ಭಂಡಾರವೇ ಇರೋದು ಬೆಳಕಿಗೆ ಬಂದಿದೆ. ಇದೂವರೆಗೆ 9 ಕೆಜಿ ಬಂಗಾರ, 42 ಕೆಜಿ ಬೆಳ್ಳಿ ಸಿಕ್ಕಿದ್ದು, ಮೂರನೇ ದಿನವೂ ಎಣಿಕೆ ಕಾರ್ಯ ಮುಂದುವರಿದಿದೆ.

ಅಗರ್ತಲಾದಿಂದ 60 ಕಿಲೋ ಮೀಟರ್​ ದೂರದಲ್ಲಿದೆ ತ್ರಿಪುರೇಶ್ವರಿ ದೇಗುಲ. ಸಾವಿರಾರು ಭಕ್ತರು ಪ್ರತೀ ವರ್ಷ ದೇವಿಯ ದರ್ಶನಕ್ಕೆ ಬರುತ್ತಾರೆ. ಪುರಾತನ ದೇಗುಲವಾಗಿರುವುದರಿಂದ, ಜಗತ್ತಿನ ಪ್ರವಾಸಿತಾಣಗಳಲ್ಲಿ ಸೇರಿಸುವ ದೃಷ್ಟಿಯಿಂದ ತ್ರಿಪುರಾ ಸಿಎಂ ಬಿಪ್ಲಬ್​ ಕುಮಾರ್​, ದೇವಸ್ಥಾನದಲ್ಲಿರೋ ಸಂಪತ್ತಿನ ಲೆಕ್ಕಾಚಾರಕ್ಕೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮಾಜಿಸ್ಟ್ರೇಟರ್​ ಹಾಗೂ ಬಿಗಿ ಪೊಲೀಸ್​ ಬಂದೋಬಸ್ತ್​ ನಡುವೆ ಸಂಪತ್ತಿನ ಎಣಿಕೆ ನಡೆಸಲಾಗುತ್ತಿದೆ.

ತ್ರಿಪುರೇಶ್ವರಿ ದೇಗುಲದಲ್ಲಿ ಒಟ್ಟು 7 ಟ್ರಂಕ್​ಗಳಿದ್ದೂ, ಅಷ್ಟರಲ್ಲೂ ಬೆಲೆಬಾಳುವ ಚಿನ್ನಾಭರಣಗಳನ್ನ ತುಂಬಿಸಿಡಲಾಗಿದೆಯಂತೆ ಇದೀಗ ನಾಲ್ಕು ಟ್ರಂಕ್​ಗಳ ಎಣಿಕೆ ಕಾರ್ಯವಷ್ಟೇ ಮುಗಿದಿದ್ದೂ, ಇನ್ನಷ್ಟು ಟ್ರಂಕ್​ಗಳನ್ನ ತೆರೆದಾಗ ಅಲ್ಲೆಷ್ಟು ಆಭರಣದ ಭಂಡಾರ ಸಿಗುತ್ತೋ ಅನ್ನೋ ಕುತೂಹಲ ಎಲ್ಲರದ್ದು.

Comments are closed.