ರಾಷ್ಟ್ರೀಯ

ತಂದೆಯ ಸ್ನೇಹಿತನಿಂದ 4 ವರ್ಷದ ಮಗಳ ಮೇಲೆ ಅತ್ಯಾಚಾರ

Pinterest LinkedIn Tumblr


ಭೋಪಾಲ್: 4 ವರ್ಷದ ಮಗುವಿನ ಮೇಲೆ ಆಕೆಯ ತಂದೆಯ ಸ್ನೇಹಿತನೇ ಅತ್ಯಾಚಾರವೆಸಗಿರುವ ಹೇಯ ಘಟನೆ ಸತ್ನಾ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಕೃತ್ಯದ ಬಳಿಕ ಅಸ್ವಸ್ಥಗೊಂಡಿರುವ ಬಾಲಕಿ ಸ್ಥಿತಿ ಚಿಂತಾಜನಕವಾಗಿದ್ದು ಮಗುವನ್ನು ವಿಮಾನದ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಶಂಕಿತ ಆರೋಪಿ ಮಹೇಂದ್ರ ಸರಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದು, ಭಾನುವಾರ ಕಂಠಪೂರ್ತಿ ಕುಡಿದು ಸ್ನೇಹಿತನ ಮನೆಗೆ ಬಂದಿದ್ದ. ತಂದೆ- ಮಗಳು ಮಲಗಿದ್ದನ್ನು ನೋಡಿದ ಆತ ಮತ್ತೆ ಬರುವುದಾಗಿ ಹೇಳಿ ಅಲ್ಲಿಂದ ತೆರಳಿದ. ಆದರೆ ಮನೆ ಹೊರಗೆ ಅಡಗಿ ಕೂತುಕೊಂಡಿದ್ದು ಸಮಯ ನೋಡಿಕೊಂಡು ಮಗುವನ್ನೆತ್ತಿಕೊಂಡು ಓಡಿದ್ದಾನೆ. ಮಧ್ಯರಾತ್ರಿ ಸಮಯದಲ್ಲಿ ತಂದೆ ಮೂತ್ರ ವಿಸರ್ಜನೆಗೆಂದು ಹೊರಗೆ ಹೋಗಿದ್ದು, ಮರಳಿದಾಗ ಮಗು ಅಲ್ಲಿರಲಿಲ್ಲ. ಸುತ್ತಮುತ್ತಲೂ ಹುಡುಕಾಡಿದರೂ ಮಗು ಸಿಗಲಿಲ್ಲ. ನಸುಕಿನ ಜಾವ 5 ಗಂಟೆ ಸುಮಾರಿಗೆ ಮಗು ಮನೆಯಿಂದ 1 ಕಿಮೀ ದೂರದಲ್ಲಿ ಪತ್ತೆಯಾಗಿತ್ತು.

ಅಸ್ವಸ್ಥ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆಕೆಯ ಮೇಲೆ ಅತ್ಯಾಚಾರವಾಗಿರುವುದು ದೃಢಪಟ್ಟಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ದೆಹಲಿಯ ಏಮ್ಸ್‌ಗೆ ರವಾನಿಸಲಾಗಿದೆ.

ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Comments are closed.