ರಾಷ್ಟ್ರೀಯ

ಕಾನೂನು ಹೋರಾಟ ನಡೆಸಲು ಹಣ ಇಲ್ಲ, ಕಿಡ್ನಿ ಮಾರಲು ಅನುಮತಿ ನೀಡಿ: ಮೋದಿಗೆ ಕೈದಿ ಪತ್ರ

Pinterest LinkedIn Tumblr


ಲಖ್ನೌ: ಕೈದಿಯೋರ್ವ ತನ್ನ ಮೇಲಿರುವ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ಹಣದ ಅವಶ್ಯಕತೆ ಇದ್ದು, ತನ್ನ ಕಿಡ್ನಿ ಮಾರಲು ಅನುಮತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾನೆ.

ಲಸ್ಕರ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ರಾಜು (30) ಅಲಿಯಾಸ್ ಮದನ್ ಈ ಪತ್ರವನ್ನು ಬರೆದಿದ್ದಾನೆ. ಮಹಿಳೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಯತ್ನ ಕೇಸಿಗೆ ಸಂಬಂಧಪಟ್ಟಂತೆ 2014 ರಲ್ಲಿ ಜೈಲು ಸೇರಿದ್ದ ಈತ ಈಗಲೂ ನ್ಯಾಯಾಂಗ ಬಂಧನದಲ್ಲೇ ಇದ್ದಾನೆ.

ಈ ಕೊಲೆಗೂ ತನಗೂ ಯಾವುದೇ ಸಂಬಂಧವಿಲ್ಲ, ಆದರೂ ನನ್ನನ್ನು ಕೇಸ್ ನಲ್ಲಿ ಜೈಲಿಗೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮೋದಿ ಅವರಿಗೆ ಪತ್ರದಲ್ಲಿ ದೂರು ನೀಡಿದ್ದಾನೆ.

ಸದ್ಯ ನಾನು ಬಡವ ಹಾಗೂ ಅಸಹಾಯಕನಾಗಿದ್ದೇನೆ. ಈ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸಲು ನನ್ನ ಹತ್ತಿರ ಹಣ ಇಲ್ಲ. ಅದ್ದರಿಂದ ನನ್ನ ಕಿಡ್ನಿ ಮಾರಿ ಬಂದ ಹಣದಲ್ಲಿ ನ್ಯಾಯಕ್ಕಾಗಿ ಕಾನೂನು ರೀತಿಯಲ್ಲಿ ಹೋರಾಡಬೇಕು. ಅಲ್ಲದೇ ಯಾರಿಂದಲೂ ನನಗೆ ನೈತಿಕ ಸಹಾಯ ಇಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುಕ್ಕಿಂತ ನನ್ನ ಕಿಡ್ನಿ ಮಾರಿ ಬಂದ ಹಣದಲ್ಲಿ ಕಾನೂನು ಹೋರಾಟ ನಡೆಸುವುದೇ ಉಳಿದಿರುವ ದಾರಿ ಎಂಬುದಾಗಿ ಪತ್ರ ಬರೆದಿದ್ದಾನೆ.

ರಾಜು ತನ್ನ ಕಿಡ್ನಿ ಮಾರಲು ಸಹಾಯ ಮಾಡುವಂತೆ ಜೈಲು ಅಧಿಕಾರಿಗಳನ್ನು ಕೇಳಿಕೊಂಡಿದ್ದಾನೆ. ಆದರೆ ಪತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಜೈಲಿನ ಮುಖ್ಯ ಅಧಿಕಾರಿ, ನನಗೆ ರಾಜು ಪ್ರಧಾನಿಯವರಿಗೆ ಪತ್ರ ಬರೆದಿರುವ ವಿಷಯ ತಿಳಿದಿಲ್ಲ, ಅದಾಗಿಯೂ ಈ ಕುರಿತಂತೆ ಪರಿಶೀಲಿಸುವುದಾಗಿ ಹೇಳಿದ್ದಾರೆ. ಅಂದಹಾಗೆ ಕೈದಿ ರಾಜು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾನೆ.

ಈ ಕುರಿತಂತೆ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ವಕೀಲರಾದ ಸುರಜ್ಪೂರ್ ಮಾತನಾಡಿ, ರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆತನ ಪರವಾಗಿ ಉಚಿತವಾಗಿ ವಾದ ಮಂಡಿಸುವುದಾಗಿ ತಿಳಿಸಿದ್ದಾಗಿ ವರದಿಯಾಗಿದೆ.

Comments are closed.