ರಾಷ್ಟ್ರೀಯ

ಗುರುತು ದೃಢೀಕರಣಕ್ಕೆ 16 ಅಂಕಿಗಳ ವಿಐಡಿ ವ್ಯವಸ್ಥೆ ಇಂದಿನಿಂದಲೇ ಜಾರಿಗೆ

Pinterest LinkedIn Tumblr


ಹೊಸದಿಲ್ಲಿ: ಗ್ರಾಹಕರ ಇ-ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಲ್ಲಿ ಆಧಾರ್‌ ಸಂಖ್ಯೆಯನ್ನು ಬಹಿರಂಗಪಡಿಸಲು ಇಚ್ಛಿಸದಿದ್ದಲ್ಲಿ 16 ಅಂಕಿಗಳ ವರ್ಚುವಲ್ ಐಡಿ- ವಿಐಡಿ (ಗುರುತಿನ ಸಂಖ್ಯೆ) ಯನ್ನು ಟೆಲಿಕಾಂ ಕಂಪನಿಗಳು ಮತ್ತು ಇತರ ಸೇವಾದಾರರಿಗೆ ನೀಡುವ ಆಯ್ಕೆಯನ್ನು ಆಧಾರ್‌ ಪ್ರಾಧಿಕಾರ ಒದಗಿಸಿದೆ. ಈ ಸೌಲಭ್ಯ ಇಂದಿನಿಂದಲೇ ಜಾರಿಗೆ ಬಂದಿದೆ.

ನೂತನ ಸೌಲಭ್ಯವನ್ನು ಭಾನುವಾರ ಉದ್ಘಾಟಿಸಲಾಗಿದ್ದು, ಸದ್ಯ ಪ್ರಾಥಮಿಕ ಹಂತದಲ್ಲಿದೆ. ಆಗಸ್ಟ್‌ 31ರ ಬಳಿಕ ಇದು ಪೂರ್ಣ ಪ್ರಮಾಣದಲ್ಲಿ ಜಾರಿಗೊಳ್ಳಲಿದ್ದು, ಅನಂತರ ಬ್ಯಾಂಕುಗಳು ಹಾಗೂ ಇತರ ಸೇವಾದಾರರು ವಿಐಡಿ ಸೌಲಭ್ಯವನ್ನು ಪಡೆಯಲಿವೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಗ್ರಾಹಕರು ಒಮ್ಮೆ ತಮ್ಮ ವಿಐಡಿಯನ್ನು ಸೇವಾದಾರರ ಜತೆ ಹಂಚಿಕೊಂಡ ಬಳಿಕ ಆಧಾರ್‌ ಸಂಖ್ಯೆಯ ಬದಲು ಯುಐಡಿ ಟೋಕನ್ ಸಂಖ್ಯೆಯನ್ನು ಸೇವಾದಾರರು ಪಡೆಯಲಿದ್ದಾರೆ. ಅದರ ಜತೆಗೆ, ಎಲ್ಲ ಸೇವಾದಾರರ ಜತೆ ಸೀಮಿತ ಮಾಹಿತಿಗಳನ್ನು ಮಾತ್ರ ಹಂಚಿಕೊಳ್ಳುವಂತೆ ಆಧಾರ್‌ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗಿದೆ. ಬ್ಯಾಂಕುಗಳು ಅಥವಾ ಆದಾಯ ತೆರಿಗೆ ಇಲಾಖೆ (ಪಾನ್‌ ನೀಡುವುದಕ್ಕಾಗಿ) ಯಂತಹ ಜಾಗತಿಕ ದೃಢೀಕರಣ ಬಳಕೆದಾರ ಏಜೆನ್ಸಿಗಳು (ಎಯುಎ) ಎಲ್ಲ ದಾಖಲೆಗಳನ್ನು ಪಡೆಯಲಿವೆ. ಆದರೆ ಟೆಲಿಕಾಂ ಕಂಪನಿಗಳು ಅಥವಾ ಇ-ವ್ಯಾಲೆಟ್‌ ಸೇವಾದಾರರು ಆಧಾರ್‌ನಿಂದ ಪಡೆಯಲಾದ ಭಾಗಶಃ ಮಾಹಿತಿಗಳನ್ನು(ಹೆಸರು, ವಿಳಾಸ ಅಥವಾ ಭಾವಚಿತ್ರ) ಮಾತ್ರ ಪಡೆಯಲಿವೆ.

ಯುಐಡಿಎಐ ಮುಖದ ಗುರುತು ಪತ್ತೆಯೊಂದಿಗೆ (ಫೇಶಿಯಲ್ ರೆಕಗ್ನಿಶನ್‌) ವಿಐಡಿ ನೀಡುತ್ತಿದ್ದು, ಇದು ಆಗಸ್ಟ್‌ನಿಂದ ಜಾರಿಗೆ ಬರಲಿದೆ. ಆಧಾರ್‌ಗೆ ಸಂಬಂಧಿಸಿದ ಖಾಸಗಿತನ ಮತ್ತು ದೃಢೀಕರಣ ಆತಂಕಗಳ ನಿವಾರಣೆಗೆ ಯುಐಡಿಎಐ ಈ ವ್ಯವಸ್ಥೆ ಜಾರಿಗೆ ತಂದಿದೆ.

ಟೈಮ್ಸ್‌ ಆಫ್ ಇಂಡಿಯಾ ಇನ್ಫೋಗ್ರಾಫಿಕ್ಸ್

ಆಧಾರ್‌ ಪ್ರಾಧಿಕಾರ ಈ ಸೇವೆಯನ್ನು ಇಂದೇ ಜಾರಿಗೆ ತಂದಿದ್ದರೂ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸೇವಾದಾರರಿಗೆ ಆಗಸ್ಟ್‌ ವರೆಗೂ ಕಾಲಾವಕಾಶ ನೀಡಿದೆ. ಇಂದಿನಿಂದಲೇ ಸೇವಾದಾರರಿಗೆ ದೃಢೀಕರಣದ ಪ್ರತಿ ವಹಿವಾಟಿನ ಮೇಲೆ 20 ಪೈಸೆಗಳ ಶುಲ್ಕ ವಿಧಿಸಲಾಗುತ್ತದೆ. ಜುಲೈ 31ರೊಳಗೆ ಹೊಸ ವ್ಯವಸ್ಥೆ ಅಳವಡಿಸಿಕೊಂಡರೆ ಈಗ ವಿಧಿಸಿರುವ ಶುಲ್ಕವನ್ನು ಹಿಂತಿರುಗಿಸಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

ಹೊಸ ವ್ಯವಸ್ಥೆಗೆ (ವಿಐಡಿ ಮೂಲಕ ದೃಢೀಕರಣ) ಬ್ಯಾಂಕುಗಳಿಗೆ ಆಗಸ್ಟ್‌ 31ರ ವರೆಗೂ ಕಾಲಾವಕಾಶ ನೀಡಲಾಗಿದೆ. ಕಾಲಮಿತಿಯನ್ನು ಪಾಲಿಸಲು ವಿಫಲವಾದರೆ ಬ್ಯಾಂಕುಗಳಿಗೂ ಈ ಶುಲ್ಕ ವಿಧಿಸಲಾಗುತ್ತದೆ.

‘ನಾಗರಿಕರ ಖಾಸಗಿತನ ಮತ್ತು ಅವರ ಆಧಾರ್ ಸಂಖ್ಯೆಗಳನ್ನು ಕಾಪಾಡಲು ಮಹತ್ವದ ಭದ್ರತಾ ಕ್ರಮವಾಗಿ ವರ್ಚುವಲ್ ಐಡಿ ವ್ಯವಸ್ಥೆ ಆರಂಭಿಸಲಾಗಿದೆ. ವಿಐಡಿ ವ್ಯವಸ್ಥೆ ಇರುವುದರಿಂದ ಆಧಾರ್‌ ಹೊಂದಿರುವವರು ತಮ್ಮ ಆಧಾರ್‌ ಸಂಖ್ಯೆಯನ್ನು ಬಹಿರಂಗಪಡಿಸದೆಯೇ ವರ್ಚುವಲ್ ಐಡಿಯನ್ನು ರಚಿಸಿ ಅದನ್ನು ಹಂಚಿಕೊಳ್ಳಬಹುದಾಗಿದೆ. ಆ ಮೂಲಕ ಆಧಾರ್ ಆಧರಿತ ದೃಢೀಕರಣ ಮಾಡಿಕೊಳ್ಳಬಹುದಾಗಿದೆ’ ಎಂದು ಯುಐಡಿಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಭೂಷಣ್‌ ಪಾಂಡೆ ತಿಳಿಸಿದರು.

Comments are closed.