ರಾಷ್ಟ್ರೀಯ

ಬಿಷಪ್‌ನಿಂದ ಕ್ರೈಸ್ತ ಸನ್ಯಾಸಿನಿಯ 13 ಬಾರಿ ಅತ್ಯಾಚಾರ

Pinterest LinkedIn Tumblr


ಕೊಟ್ಟಾಯಂ: ಭೂ ಅವ್ಯವಹಾರ ಮತ್ತು ಲೈಂಗಿಕ ಶೋಷಣೆಯ ಆರೋಪದಿಂದ ತತ್ತರಿಸುತ್ತಿರುವ ಕೇರಳದ ಸಿರೊ-ಮಲಬಾರ್‌ ಕ್ಯಾಥೊಲಿಕ್‌ ಚರ್ಚ್‌ಗೆ ಮತ್ತೊಂದು ಆಘಾತ ಎದುರಾಗಿದೆ.

ಕ್ಯಾಥೊಲಿಕ್‌ ಧರ್ಮಪ್ರಾಂತ್ಯದ ಬಿಷಪ್‌ ಆಗಿರುವ ಫ್ರಾಂಕೋ ಮುಲಕ್ಕಲ್‌ ಅವರು 2014ರಿಂದ ಆರಂಭಿಸಿ 2016ರವರೆಗೆ 13 ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ದೇಶದಲ್ಲಿ ಬಿಷಪ್‌ ಮೇಲೆ ಅತ್ಯಾಚಾರದ ನೇರ ಆರೋಪ ಎದುರಾಗಿರುವುದು ಇದು ಮೊದಲ ಬಾರಿ. ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು, ಐವರು ಪಾದ್ರಿಗಳು ತನ್ನ ಪತ್ನಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದ್ದರು.

2014ರಲ್ಲಿ ಕುರುವಿಲಂಗಾಡ್‌ ಚರ್ಚ್‌ನ ಗೆಸ್ಟ್‌ ಹೌಸ್‌ಗೆ ಬಂದಾಗ ಮೊದಲ ಬಾರಿ ಅತ್ಯಾಚಾರ ನಡೆಸಿದರು. ಬಳಿಕ 13 ಬಾರಿ ಶೋಷಣೆ ಮಾಡಿದ್ದಾರೆ ಎನ್ನುವುದು ಆಕೆಯ ಆರೋಪ. ಈ ಮೊದಲು ಚರ್ಚ್‌ ವ್ಯವಸ್ಥೆಯ ಮೇಲಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳದೆ ಇರುವುದರಿಂದ ಪೊಲೀಸರ ಮೊರೆ ಹೋಗಿರುವುದಾಗಿ ತಿಳಿಸಿದ್ದಾರೆ.

ಈ ನಡುವೆ, ಜಲಂಧರ್‌ ಧರ್ಮಪ್ರಾಂತ್ಯದ ಬಿಷಪ್‌ ಆಗಿರುವ ಮುಲಕ್ಕಲ್‌ ಮೊದಲೇ ಕೊಟ್ಟಾಯಂ ಪೊಲೀಸರಿಗೆ ದೂರು ನೀಡಿ, ಸನ್ಯಾಸಿನಿಯೊಬ್ಬರನ್ನು ವರ್ಗಾವಣೆ ಮಾಡಿದ್ದಕ್ಕೆ ಅತ್ಯಾಚಾರದ ಆರೋಪ ಹೊರಿಸುವ ಬೆದರಿಕೆ ಹಾಕಲಾಗುತ್ತಿದೆ ಎಂದು ಹೇಳಿದ್ದರು.

ಕೊಟ್ಟಾಯಂ ಎಸ್‌ಪಿ ಹರಿಶಂಕರ್‌ ಎರಡೂ ಪ್ರಕರಣ ದಾಖಲಿಸಿಕೊಂಡು ಡಿವೈಎಸ್‌ಪಿ ಮಟ್ಟದ ಅಧಿಕಾರಿಯನ್ನು ತನಿಖೆಗೆ ನಿಯೋಜಿಸಿದ್ದಾರೆ.

Comments are closed.