ರಾಷ್ಟ್ರೀಯ

ಫೋನ್‌ನಲ್ಲಿ ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದ ಮಗಳನ್ನು ಬಡಿದು ಸಾಯಿಸಿದ ಅಪ್ಪ!

Pinterest LinkedIn Tumblr


ವಿಜಯವಾಡ: ಫೋನ್‌ನಲ್ಲಿ ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದ ಪುತ್ರಿಯನ್ನು ತಂದೆಯೇ ದೊಣ್ಣೆಯಿಂದ ಬಡಿದು ಸಾಯಿಸಿದ ಬೆಚ್ಚಿಬೀಳಿಸುವ ಘಟನೆ ಕೃಷ್ಣಾ ಜಿಲ್ಲೆಯ ತೋಟರವುಲಪಡು ಗ್ರಾಮದಲ್ಲಿ ಶನಿವಾರ ನಡೆದಿದೆ.

ಗುಡ್ಲವಲ್ಲೇರು ಕಾಲೇಜಿನಲ್ಲಿ ಬಿ ಫಾರ್ಮಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದ ಚಂದ್ರಿಕಾ ಮರ್ಯಾದಾ ಹತ್ಯೆಗೆ ಬಲಿಯಾದ ಯುವತಿಯಾಗಿದ್ದಾಳೆ.

ಶುಕ್ರವಾರವಷ್ಟೇ ತನ್ನ ಜನ್ಮದಿನವನ್ನಾಚರಿಸಿಕೊಂಡಿದ್ದ ಚಂದ್ರಿಕಾ, ತಾನೊಬ್ಬನನ್ನು ಪ್ರೀತಿಸುತ್ತಿದ್ದು, ಆತನನ್ನೇ ಮದುವೆಯಾಗುವುದಾಗಿ ತಂದೆ- ತಾಯಿ ಬಳಿ ಹೇಳಿದ್ದಳು. ಆದರೆ ಪೋಷಕರು ಅದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು ಎಂದು ನಂದಿಗ್ರಾಮದ ಡಿಎಸ್‌ಪಿ, ಟಿ ರಾಧೇಶ ಮುರಳಿ ತಿಳಿಸಿದ್ದಾರೆ.

ಶನಿವಾರ ಸಂಜೆ ಚಂದ್ರಿಕಾ ಮೊಬೈಲ್ ಫೋನ್‌ನಲ್ಲಿ ಪ್ರೇಮಿ ಜತೆ ಮಾತನಾಡುತ್ತಿದ್ದಾಗ ತಂದೆ ಕೋಟಯ್ಯ ಕೆಲಸದಿಂದ ಮನೆಗೆ ಹಿಂತಿರುಗಿದ್ದಾನೆ. ಪ್ರೇಮಿ ಜತೆ ಫೋನ್‌ ಸಂಭಾಷಣೆಯಲ್ಲಿ ವ್ಯಸ್ತಳಾಗಿದ್ದ ಮಗಳು ಓಡಿ ಹೋಗಲು ಯೋಜನೆ ರೂಪಿಸುತ್ತಿದ್ದಾಳೆ ಎಂದು ಅನುಮಾನಿಸಿ ಕೊಡಲಿಗೆ ಹಿಡಿಕೆಯಾಗಿ ಬಳಸುತ್ತಿದ್ದ ಮರದ ದೊಣ್ಣೆಯಿಂದ ಆಕೆಯ ತಲೆಗೆ ಮನಬಂದಂತೆ ಬಡಿದಿದ್ದಾನೆ.

ಪತಿಯ ರೌದ್ರಾವತಾರ ಕಂಡು ಓಡಿ ಬಂದ ಪತ್ನಿ ಮಗಳನ್ನು ರಕ್ಷಿಸಲು ಪ್ರಯತ್ನಿಸಿದ್ದಾಳೆ, ಆದರೆ ಪತಿಯನ್ನು ತಡೆಯಲು ಆಕೆಯಿಂದ ಸಾಧ್ಯವಾಗಿಲ್ಲ.

ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕ್ರೂರ ತಂದೆಯನ್ನು ಬಂಧಿಸಲಾಗಿದ್ದು, ಮೃತಳ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

Comments are closed.