ರಾಷ್ಟ್ರೀಯ

ಲಖನೌನಲ್ಲಿರುವ ಮಸೀದಿಯೊಂದರ ಮುಂಭಾಗದಲ್ಲಿ ಲಕ್ಷ್ಮಣನ ವಿಗ್ರಹ ಪ್ರತಿಷ್ಠಾಪನೆಗೆ ಆಗ್ರಹ

Pinterest LinkedIn Tumblr

ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿರುವ ತೆಲೆ ವಾಲಿ ಮಸೀದಿಯ ಮುಂಭಾಗದಲ್ಲಿ ಲಕ್ಷ್ಮಣನ ವಿಗ್ರಹ ಪ್ರತಿಷ್ಠಾಪನೆಗೆ ಯೋಗಿ ಸರ್ಕಾರದ ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಬಿಜೆಪಿ ಶಾಸಕರಾದ ರಾಮಕೃಷ್ಣ ಯಾದವ್ ಹಾಗೂ ರಜನೀಷ್ ಗುಪ್ತಾ, ಜೂ.27 ರಂದು ಲಖನೌ ನಗರ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಲಕ್ಷ್ಮಣನ ವಿಗ್ರಹವನ್ನು ತೆಲೆವಾಲಿ ಮಸೀದಿಯ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಪ್ರಸ್ತಾವನೆ ಶೀಘ್ರವೇ ವಿಧಾನಸಭೆಗೂ ರವಾನೆಯಾಗಲಿದೆ.

ಲಕ್ಷ್ಮಣನ ಬಗ್ಗೆ ಜನರಲ್ಲಿರುವ ಭಾವನೆಗಳನ್ನು ಗೌರವಿಸಲು ಹಾಗೂ ಲಖನೌಗೂ ಲಕ್ಷ್ಮಣನಿಗೂ ಇರುವ ಐತಿಹಾಸಿಕ ನಂಟನ್ನು ತಿಳಿಸಲು ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲು ಉದ್ದೇಶಿಸಲಾಗಿದೆ ಎಂದು ಶಾಸಕರು ಹೇಳಿದ್ದಾರೆ.

ಬಿಜೆಪಿ ಶಾಸಕರ ಬೇಡಿಕೆಗೆ ಮುಸ್ಲಿಂ ಸಮುದಾಯದ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಮಸೀದಿ ಮುಂಭಾಗದಲ್ಲಿ ಲಕ್ಷ್ಮಣನ ವಿಗ್ರಹ ಸ್ಥಾಪಿಸಿದರೆ ನಮ್ಮ ಪ್ರಾರ್ಥನೆಗೆ ಅಡ್ಡಿ ಉಂಟಾಗುತ್ತದೆ ಎಂದು ಹೇಳಿದ್ದಾರೆ. ಈ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೆಲೆ ವಾಲಿ ಮಸೀದಿಯ ಮುಸ್ಲಿಂ ಧರ್ಮಗುರು ಫಝಲ್-ಎ-ಮನ್ನಾನ್ “ಇಸ್ಲಾಂ ನಲ್ಲಿ ವಿಗ್ರಹದ ಎದುರು ಪ್ರಾರ್ಥನೆ ಸಲ್ಲಿಸುವುದಕ್ಕೆ ಸಾಧ್ಯವಿಲ್ಲ, ಈ ಬಗ್ಗೆ ನಾವು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಯೋಗಿ ಆದಿತ್ಯನಾಥ್ ಅವರ ಗಮನಕ್ಕೂ ಈ ವಿಷಯವನ್ನು ತರುತ್ತೇವೆ ಎಂದು ಹೇಳಿದ್ದಾರೆ.

ಇಂದಿನ ಲಖನೌ ನಗರ ಪ್ರದೇಶವನ್ನು ಹಿಂದ ಲಕ್ಷ್ಮಣ ಅಭಿವೃದ್ಧಿಪಡಿಸಿದ್ದ ಎನ್ನಲಾಗುತ್ತದೆ. ಆದ್ದರಿಂದ ಲಕ್ಷ್ಮಣನ ವಿಗ್ರಹವನ್ನು ಸ್ಥಾಪಿಸಿ ಲಖನೌ ಪ್ರದೇಶಕ್ಕೆ ಲಕ್ಷ್ಮಣಪುರಿ ಎಂದು ಮರುನಾಮಕರಣ ಮಾಡಬೇಕೆಂದು ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.

Comments are closed.