ರಾಷ್ಟ್ರೀಯ

ಸಂತ ಕಬೀರರ ಮಹಾಪರಿನಿರ್ವಾಣ ಸ್ಥಾಲಿಗೆ ಚಾದರ್ ಅರ್ಪಿಸಿದ ಬಳಿಕ ಪ್ರಧಾನಿ ಮೋದಿ ಹೇಳಿದ್ದೇನು…?

Pinterest LinkedIn Tumblr

ಮಘರ್: ಶಾಂತಿ ಸಾಮರಸ್ಯ ಸಾರಿದ ಸಂತ ಕಬೀರರನ್ನು ಅನುಸರಿಸಬೇಕು ಎಂದು ಹೇಳುವ ನಾಯಕರಿಗೆ ಅವರ ಬಂಗಲೆಗಳ ಬಗ್ಗೆಯೇ ಚಿಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ನಾಯಕರ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಇಂದು ಉತ್ತರ ಪ್ರದೇಶದ ಮಘರ್ ನಲ್ಲಿ ಸಂತ ಕಬೀರ ಅವರ ಮಹಾಪರಿನಿರ್ವಾಣ ಸ್ಥಾಲಿಗೆ ಚಾದರ್ ಅರ್ಪಿಸಿದ ಬಳಿಕ ಪಕ್ಷದ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜಕೀಯ ಲಾಭಕ್ಕಾಗಿ ಕೆಲವು ಪಕ್ಷಗಳು ಜನರಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಶಾಂತಿ ಕದಡುತ್ತಿವೆ ಎಂದು ಆರೋಪಿಸಿದರು.

ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದವರು ಮತ್ತು ಅದಕ್ಕೆ ವಿರೋಧಿಸಿದವರು ಈಗ ಒಂದಾಗಿದ್ದಾರೆ. ಆದರೆ ಅವರಿಗೆ ಶಾಂತಿ ಮತ್ತು ಅಭಿವೃದ್ಧಿ ಬೇಕಾಗಿಲ್ಲ. ಶಾಂತಿ ಕದಡಿದರೆ ರಾಜಕೀಯ ಲಾಭ ಪಡೆದುಕೊಳ್ಳಬಹುದು ಎಂದು ಅವರು ಭಾವಿಸಿದ್ದಾರೆ ಎಂದರು.

ಎರಡು ದಿನಗಳ ಹಿಂದೆ ತುರ್ತು ಪರಿಸ್ಥಿತಿ ಹೇರಿದ 43ನೇ ವರ್ಷಾಚರಣೆಯಾಯಿತು. ಅಧಿಕಾರದ ದುರಾಸೆಗಾಗಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು ಎಂದ ಅವರು, ಸಮಾಜದ ಯೋಗಕ್ಷೇಮದ ಕುರಿತು ಅವರು ಗಮನ ಹರಿಸುವುದಿಲ್ಲ. ಆದರೆ, ತಮ್ಮ ಕ್ಷೇಮ ಮತ್ತು ತಮ್ಮ ಕುಟುಂಬದ ಕ್ಷೇಮಕ್ಕೆ ಒತ್ತು ನೀಡುತ್ತಾರೆ ಎಂದು ನೆಹರೂ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

ತಾವು ಸಂತ ಕಬೀರರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ನಾಯಕರು, ಕೇವಲ ತಮ್ಮ ಕುಟುಂಬ ಮತ್ತು ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಿವೆ. ಅವರಿಗೆ ಸಮಾಜದ ಅಭಿವೃದ್ಧಿ ಬೇಕಾಗಿಲ್ಲ ಎಂದರು.

ಇದು ಸಂತ ಕಬೀರ, ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಅವರ ದೇಶ ಎಂಬುದು ಅವರಿಗೆ ಗೊತ್ತಿಲ್ಲ. ಕೆಲ ನಾಯಕರಿಗೆ ತಮ್ಮ ಬಂಗಲೆಗಳ ಬಗ್ಗೆಯೇ ಚಿಂತೆ. ಅವರಿಗೆ ಬಡವರ ಮನೆಗಳ ಬಗ್ಗೆ ಯಾವುದೇ ಚಿಂತೆ ಇಲ್ಲ ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯವಾಡಿದರು.

ಎರಡು ದಿನಗಳ ಕಬೀರ ಮಹೋತ್ಸವದಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಮಘರ್ ಗೆ ಆಗಮಿಸಿದ್ದು, ಚಾದರ್ ಅರ್ಪಿಸಿದ ಬಳಿಕ ಕಬೀರ ಅಕಾಡೆಮಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದರು.

ಕಬೀರ ಅವರ 500ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಸಂಗೀತ , ನೃತ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Comments are closed.