ರಾಷ್ಟ್ರೀಯ

ಸಾಲ ಮರುಪಾವತಿಗೆ ತನ್ನ ಒಡೆತನದಲ್ಲಿರುವ 13, 900 ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ಮುಂದಾದ ವಿಜಯ್ ಮಲ್ಯ

Pinterest LinkedIn Tumblr

ನವದೆಹಲಿ: ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ವಂಚಿಸಿ ವಿದೇಶದಲ್ಲಿರುವ ಮದ್ಯ ಉದ್ಯಮಿ ವಿಜಯ್ ಮಲ್ಯನನ್ನು ಜಾರಿ ನಿರ್ದೇಶನಾಲಯ ದೇಶಭ್ರಷ್ಟ ಅಪರಾಧಿ ಎಂದು ಘೋಷಿಸಿದ್ದ ಬೆನ್ನಲ್ಲೇ ತನ್ನ ಒಡೆತನದಲ್ಲಿರುವ 13,900 ಕೋಟಿ ರೂ ಮೌಲ್ಯದ ಆಸ್ತಿ ಮಾರಾಟ ಮಾಡಿ, ಸಾಲ ತೀರಿಸುವುದಾಗಿ ವಿಜಯ್ ಮಲ್ಯ ಹೇಳಿದ್ದಾರೆ.

ರಾಜಕೀಯ ಉದ್ದೇಶದಿಂದ ತಮ್ಮನ್ನು ಬಲಿಪಶು ಮಾಡಲಾಗಿದ್ದು,ಬ್ಯಾಂಕುಗಳಿಗೆ ಸಾಲ ವಂಚನೆ ಹೆಸರಿನಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುವಂತೆ ಮಾಡಲಾಗಿದೆ ಎಂದು ವಿಜಯ್ ಮಲ್ಯ ಆರೋಪಿಸಿದ್ದಾರೆ.

ಸಾಲ ಮರುಪಾವತಿ ಮಾಡಲು ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ ತಮ್ಮ ಆಸ್ತಿಪಾಸ್ತಿ ಮಾರಾಟ ಮಾಡಲು ಅನುಮತಿ ನೀಡುವಂತೆ ಯುನೈಟೆಡ್ ಬ್ರಿವೆರೀಸ್ ಹೊಲ್ಡಿಂಗ್ ಕಂಪನಿ ಜೂನ್. 22 ರಂದು ಹೈಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿರುವುದಾಗಿ ಎಂದು ಅವರು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

ತಮ್ಮ ಒಡೆತನದಲ್ಲಿರುವ ಆಸ್ತಿ ಮಾರಾಟ ಮಾಡಿ ಸಾರ್ವಜನಿಕ ಬ್ಯಾಂಕುಗಳ ಸಾಲ ಮರುಪಾವತಿಸಲು ನ್ಯಾಯಾಲಯ ಅನುಮತಿ ನೀಡಬೇಕು. ಅಂತೆಯೇ ಸಿಬಿಐ ಹಾಗೂ ಜಾರಿನಿರ್ದೇಶನಾಲಯಕ್ಕೂ ನಿರ್ದೇಶನ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಒಂದು ವೇಳೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ತಮ್ಮ ಪ್ರಸ್ತಾಪವನ್ನು ಮಾನ್ಯ ಮಾಡದೇ ಹೋದರೆ, ಇದು ತಮ್ಮ ವಿರುದ್ದ ಹೂಡಿರುವ ಷಡ್ಯಂತ್ರ ಎಂಬುದು ಸ್ಪಷ್ಟವಾಗಲಿದೆ ಎಂದು ಮಲ್ಯ ಹೇಳಿದ್ದಾರೆ.

ಬ್ಯಾಂಕುಗಳಿಗೆ ಸಾಲ ಮರುಪಾವತಿಸಲು ತಮ್ಮ ಆಸ್ತಿ ಮಾರಾಟ ಮಾಡುವಲ್ಲಿ ಇಡಿ ಆಕ್ಷೇಪ ವ್ಯಕ್ತಪಡಿಸಿದ್ದರೆ ರಾಜಕೀಯ ಪ್ರೇರಣೆ ಎಂಬುದು ಸ್ಪಷ್ಟವಾಗಲಿದ್ದು, ಕಾನೂನು ಆಧಾರವಿಲ್ಲದೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

2016 ಮಾರ್ಚ್ ತಿಂಗಳಲ್ಲಿ ವಿಜಯ್ ಮಲ್ಯ ವಿದೇಶಕ್ಕೆ ತೆರಳಿದಾಗ ವಿಚಾರಣೆನ್ನೂ ಮಾಡಲಿಲ್ಲ. ಬಂಧನ ಕೂಡಾ ಆಗಲಿಲ್ಲ. ಮಲ್ಯ ಒಡೆತನದ ಕಿಂಗ್ ಪಿಶರ್ ಏರ್ ಲೈನ್ಸ್ 9 ಸಾವಿರ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿತ್ತು. ಆಗಿನಿಂದಲೂ ಮಲ್ಯನನ್ನು ಸ್ವದೇಶಕ್ಕೆ ಕರೆತಂದು ವಿಚಾರಣೆ ನಡೆಸಲು ಭಾರತ ಪ್ರಯತ್ನಿಸುತ್ತಲೇ ಇದೆ.

ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಸುಗ್ರೀವಾಜ್ಞೆ ಅಡಿಯಲ್ಲಿ ವಿಜಯ್ ಮಲ್ಯನನ್ನು ನ್ಯಾಯಾಲಯದಲ್ಲಿ ಎದುರಿಸಲು ಇಡಿ ಹಾಗೂ ಸಿಬಿಐ ಈಗಾಗಲೇ ನ್ಯಾಯಾಂಗದ ಮೊರೆ ಹೋಗಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಮಧ್ಯೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಎಂ. ಜೆ. ಅಕ್ಬರ್ ಮಾತನಾಡಿ,ಈವರೆಗೂ ಮಲ್ಯ ಏಕೆ ಮರುಪಾವತಿ ಮಾಡಲಿಲ್ಲ ಎಂದಿದ್ದಾರೆ. ಒಂದು ವೇಳೆ ಬ್ಯಾಂಕುಗಳಿಗೆ ಮರುಪಾವತಿಸುವುದಾಗಿ ಹೇಳಿದ್ದರೂ ಅದು ಅನೇಕ ವರ್ಷಗಳ ಕಾಲ ಹಿಡಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Comments are closed.