
ನವದೆಹಲಿ: ಕಾವೇರಿ ಸಮಿತಿ ರಚನೆ ಸಂಬಂಧ ಕರ್ನಾಟಕದ ವಿರೋಧ ಮತ್ತು ಆತಂಕಗಳನ್ನು ಲೆಕ್ಕಿಸದೇ ಕೇಂದ್ರ ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ.
ಮೂಲಗಳ ಪ್ರಕಾರ ಕರ್ನಾಟಕ ಸರ್ಕಾರ ಈ ವರೆಗೂ ತನ್ನ ಪ್ರತಿನಿಧಿಯ ಹೆಸರನ್ನು ಕಳುಹಿಸಿಲ್ಲ ಎಂಬ ನೆಪವೊಡ್ಡಿ ತಾನೇ 8 ಮಂದಿಯ ಸದಸ್ಯರ ಕಾವೇರಿ ಸಮಿತಿಯನ್ನು ರಚನೆ ಮಾಡಿದೆ. ಈ ಬಗ್ಗೆ ಶುಕ್ರವಾರ ರಾತ್ರಿ ಕೇಂದ್ರ ಜಲಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದ್ದು, ಕೇಂದ್ರೀಯ ಜಲ ಆಯೋಗದ ಮುಖ್ಯ ಎಂಜಿನಿಯರ್ ನವೀನ್ ಕುಮಾರ್ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಇನ್ನು ಕೇರಳ, ತಮಿಳುನಾಡು, ಪುದುಚೆರಿಯ ನೀರಾವರಿ ಮುಖ್ಯ ಎಂಜಿನಿಯರ್‌ಗಳು, ಹವಾಮಾನ ಇಲಾಖೆಯ ವಿಜ್ಞಾನಿ ಡಾ.ಎ.ಮಹಾಪಾತ್ರ, ಕೇಂದ್ರೀಯ ಜಲ ಆಯೋಗದ ಕೊಯಮತ್ತೂರು ಸಿ.ಅಂಡ್ ಎಸ್.ಆರ್.ಓ. ಮುಖ್ಯ ಎಂಜಿನಿಯರ್ ಎನ್.ಎಂ.ಕೃಷ್ಣನುಣ್ಣಿ, ಕೇಂದ್ರ ಸರ್ಕಾರದ ತೋಟಗಾರಿಕೆ ಆಯುಕ್ತರು ಹಾಗೂ ಕೇಂದ್ರೀಯ ಜಲ ಆಯೋಗದ ಮುಖ್ಯ ಎಂಜಿನಿಯರ್ (ವೈಬಿಓ) ಎ.ಎಸ್.ಗೋಯಲ್ ನಿಯಂತ್ರಣ ಸಮಿತಿಯ ಸದಸ್ಯರಾಗಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಕೇಂದ್ರೀಯ ಜಲ ಆಯೋಗದ ಅಧ್ಯಕ್ಷ ಮಸೂದ್ ಹುಸೇನ್ ಅಧ್ಯಕ್ಷತೆಯಲ್ಲಿ ಈ ಹಿಂದೆಯೇ ರಚಿಸಲಾಗಿತ್ತು. ಈಗ ರಚಿಸಲಾಗಿರುವ ನೀರು ನಿಯಂತ್ರಣ ಸಮಿತಿಯು ಪ್ರಾಧಿಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ. ಸುಪ್ರೀಂ ಕೋರ್ಟ್‌ನಿಂದ ಪರಿಷ್ಕೃತವಾಗಿರುವ ಕಾವೇರಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪನ್ನು ಜಾರಿಗೆ ತರಲು ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ರಚನೆಯ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಇದೇ ಜೂನ್ ಒಂದರಂದು ಹೊರಡಿಸಿತ್ತು.
ಕರ್ನಾಕಟಕದ ಪ್ರತಿನಿಧಿ ಇಲ್ಲದೇ ಸಮಿತಿಯಿಂದ ನಿರ್ಧಾರ ಸಾಧ್ಯತೆ
ಕರ್ನಾಟಕದ ಸದಸ್ಯರಿಲ್ಲದೇ ಸಮಿತಿ ರಚನೆಯಾಗಿರುವುದರಿಂದ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಯ ಸಭೆಗಳು ಕರ್ನಾಟಕದ ಪ್ರತಿನಿಧಿಯ ಅನುಪಸ್ಥಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿ ಏರ್ಪಟ್ಟಿದೆ.
Comments are closed.