ರಾಷ್ಟ್ರೀಯ

ಕಾಶ್ಮೀರದಲ್ಲಿ ಎನ್’ಕೌಂಟರ್: ಐಎಸ್ ಮುಖ್ಯಸ್ಥ ಸೇರಿ 4 ಉಗ್ರರನ್ನು ಸದೆಬಡಿದ ಸೇನೆ; ಓರ್ವ ನಾಗರೀಕ, ಯೋಧ ಹುತಾತ್ಮ

Pinterest LinkedIn Tumblr

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಉಗ್ರರ ವಿರುದ್ಧ ಎನ್ ಕೌಂಟರ್ ನಡೆಸಿದ್ದು, ಜಮ್ಮು ಮತ್ತು ಕಾಶ್ಮೀರದ ಇಸ್ಲಾಮಿಕ್ ಸ್ಟೇಟ್ (ಐಎಸ್) ಮುಖ್ಯಸ್ಥ ಸೇರಿ ಒಟ್ಟು 4 ಉಗ್ರರನ್ನು ಹತ್ಯೆ ಮಾಡಿದೆ ಎಂದು ಶುಕ್ರವಾರ ತಿಳಿದುಬಂದಿದೆ.

ಅನಂತ್ ನಾಗ್ ಜಿಲ್ಲೆಯಲ್ಲಿ ನಡೆಸಲಾದ ಎನ್ ಕೌಂಟರ್ ಕುರಿತಂತೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಅನಂತ್ ನಾಗ್ ಜಿಲ್ಲೆಯ ಶ್ರೀಗುಫ್ವಾರಾ ಗ್ರಾಮದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿಗಳು ನಡೆದಿದ್ದು, ಈ ವೇಳೆ ಓರ್ವ ನಾಗರೀಕ ಮೃತಪಟ್ಟು, ಮತ್ತೊರ್ವ ಯೋಧ ಹುತಾತ್ಮರಾಗಿದ್ದಾರೆಂದು ಹೇಳಿದ್ದಾರೆ.

ಪ್ರಸ್ತುತ ಎನ್ ಕೌಂಟರ್ ಹತ್ಯೆಯಾದ ಐಸ್ ಮುಖ್ಯಸ್ಥನನ್ನು ದಾವೂದ್ ಎಂದು ಗುರ್ತಿಸಲಾಗಿದೆ.

ಉಗ್ರರು ನಡೆಸಿದ ದಾಳಿಯಲ್ಲಿ ಮೂವರು ನಾಗರೀಕರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಎನ್’ಕೌಂಟರ್ ನಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ನಾಲ್ವರೂ ಉಗ್ರರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ವೈದ್ ಅವರು ಹೇಳಿದ್ದಾರೆ.

ಉಗ್ರರು ದಾಳಿ ನಡೆಸುತ್ತಿದ್ದಂತೆಯೇ ಭದ್ರತಾ ಪಡೆಗಳು ಎನ್ ಕೌಂಟರ್ ನಡೆಸಲು ಮುಂದಾಗಿದ್ದರು. ಈ ವೇಳೆ ಕೆಲ ಯುವಕರು ಭದ್ರತಾ ತಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಕೆಲ ಪ್ರತಿಭಟನಾಕಾರರು ಹಾಗೂ ನಾಗರೀಕರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಈ ನಡುವೆ ವದಂತಿಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಸರ್ಕಾರ, ಅನಂತ್ ನಾಗ್ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

Comments are closed.