ರಾಷ್ಟ್ರೀಯ

ಕ್ಯಾನ್ಸರನ್ನು ಗೆದ್ದು ಬರುವೆನೆಂದ ಬಾಲಿವುಡ್ ನಟ ಇರ್ಫಾನ್‌ ಖಾನ್‌ ಪತ್ರ

Pinterest LinkedIn Tumblr


ಹೊಸದಿಲ್ಲಿ: ‘ನ್ಯೂರೋನ್‌ ಡಾಕ್ರೈನ್‌ ಕ್ಯಾನ್ಸರ್‌. ಇದು ನನ್ನ ಶಬ್ದಕೋಶದ ಹೊಸ ಪದ. ಇದೊಂದು ಅಪರೂಪದ ಅರ್ಬುದ ರೋಗ. ಚಿಕಿತ್ಸೆಯ ಫ‌ಲ ಊಹಿಸಿ ಹೇಳಲಾಗದ್ದು. ಒಟ್ಟಿನಲ್ಲಿ ನಾನೀಗ ಟ್ರಯಲ್‌ ಆ್ಯಂಡ್‌ ಎರರ್‌ ಗೇಮ್‌ ನ ಒಂದು ಭಾಗವಾಗಿದ್ದೇನೆ.’ ಇದು ಬಾಲಿವುಡ್‌ನ‌ ಖ್ಯಾತ ನಟ ಇರ್ಫಾನ್‌ ಖಾನ್‌ ಅವರ ಮನದ ಮಾತು. ಅಪರೂಪದ ಕ್ಯಾನ್ಸರ್‌ ನಿಂದ ಬಳಲುತ್ತಿರುವ ಖಾನ್‌ ಇದೀಗ ತಮ್ಮ ರೋಗದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಸದ್ಯ ಲಂಡನ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ತಮ್ಮ ರೋಗ, ಅದರ ನೋವು, ಭಯ, ಚಿಕಿತ್ಸೆ… ಎಲ್ಲದರ ಕುರಿತೂ ಪತ್ರವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಪ್ರತಿ ಬಾರಿ ಆಸ್ಪತ್ರೆಗೆ ಬಂದಾಗಲೂ ಆಗುತ್ತಿದ್ದ ಆತಂಕವನ್ನು, ಜತೆಗೆ, ಭರವಸೆಯ ಬೆಳಕಿನ ನಿರೀಕ್ಷೆಯನ್ನೂ ಹೊರಹಾಕಿದ್ದಾರೆ.

‘ಆಸ್ಪತ್ರೆಯ ಒಳಗೆ ಬಂದಾಗ ನನಗಾದ ಅಚ್ಚರಿ ಅಷ್ಟಿಷ್ಟಲ್ಲ. ಆಸ್ಪತ್ರೆಯ ಮುಂಭಾಗದಲ್ಲಿರುವುದೇ ಲಾರ್ಡ್ಸ್ ಸ್ಟೇಡಿಯಂ. ಇದು ನನ್ನ ಬಾಲ್ಯದ ಕನಸಿನ ಮೆಕ್ಕಾ ಇದ್ದಂತೆ. ನೋವಿನ ಮಧ್ಯೆಯೂ ನಾನು ಅಲ್ಲಿ ನಗುತ್ತಿರುವ ವಿವಿಯನ್‌ ರಿಚರ್ಡ್ಸ್ ಅವರ ಪೋಸ್ಟರ್‌ ಕಂಡೆ. ಈ ಬ್ರಹ್ಮಾಂಡಕ್ಕೆ ಅದೆಂಥಾ ಅಭೂತ ಪೂರ್ವ ಶಕ್ತಿ ಇದೆ ಎಂಬುದು ಗೊತ್ತಾಯಿತು. ನನ್ನಲ್ಲೀಗ ಅನಿಶ್ಚಿತತೆ ಮನೆ ಮಾಡಿದೆ. ಆದರೆ, ನಾನೀಗ ಮಾಡಲು ಸಾಧ್ಯವಿರುವುದು ಒಂದನ್ನು. ಅದೇನೆಂದರೆ, ನನ್ನ ಸಾಮರ್ಥ್ಯವನ್ನು ಅರಿತುಕೊಂಡು, ಈ ರೋಗವೆಂಬ ಕ್ರೀಡೆಯಲ್ಲಿ ಆಡಿ ಗೆಲ್ಲುವುದು’ ಎಂದು ಬರೆದಿದ್ದಾರೆ ಇರ್ಫಾನ್‌. ಬಾಲಿವುಡ್‌ ತಾರೆಯರು ಸೇರಿದಂತೆ ಅನೇಕ ಗಣ್ಯರು ಇರ್ಫಾನ್‌ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

Comments are closed.