ರಾಷ್ಟ್ರೀಯ

ಒಂದು ವರ್ಷದ ಹೆಣ್ಣು ಮಗುವಿನ ಅಪಹರಣ, ಅತ್ಯಾಚಾರ, ಕೊಲೆ: ಆರೋಪಿ ಸೆರೆ

Pinterest LinkedIn Tumblr


ಪುಣೆ : 22 ವರ್ಷ ಪ್ರಾಯದ ವಿಕೃತಕಾಮಿ ತರುಣನೋರ್ವ ಒಂದು ವರ್ಷದ ಹೆಣ್ಣು ಮಗುವೊಂದನ್ನು ಅಪಹರಿಸಿ ಅತ್ಯಾಚಾರ ಎಸಗಿ ಬಳಿಕ ಅದನ್ನು ಕೊಂದಿರುವ ಅತ್ಯಮಾನುಷ ಘಟನೆ ಇಲ್ಲಿಗೆ ಸಮೀಪದ ಕಾಲಭೋರ್‌ ಪ್ರದೇಶದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಲೋನಿ ಕಾಲಭೋರ್‌ ನಲ್ಲಿ ತನ್ನ ಹೆತ್ತವರ ಜತೆಗೆ ತೆರೆದ ಪ್ರದೇಶದಲ್ಲಿ ನಿದ್ರಿಸಿಕೊಂಡಿದ್ದ ಒಂದು ವರ್ಷ ಪ್ರಾಯದ ಹಸುಳೆಯನ್ನು ವಿಕೃತ ಕಾಮಿ, ಮಲಹರಿ ಬಾನ್‌ಸೋಡೆ ಎಂಬಾತ ಅಪಹರಿಸಿ, ಅತ್ಯಾಚಾರಗೈದು ಬಳಿಕ ಅದನ್ನು ಕೊಂದನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಕಾಮಾಂಧ ತರುಣನನ್ನು ಪೊಲೀಸರು ಬಂಧಿಸಿದ್ದಾರೆ.

ಮಗುವಿನ ಹೆತ್ತವರು ತಮಿಳು ನಾಡಿನವರಾಗಿದ್ದು ಅವರು ಇಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ಮಧ್ಯರಾತ್ರಿಯ ವೇಳೆ ಎಚ್ಚರಗೊಂಡ ಹೆತ್ತವರು ತಮ್ಮ ಪಕ್ಕದಲ್ಲಿ ಮಗು ಇಲ್ಲದ್ದನ್ನು ಕಂಡು ದಿಗಿಲಾಗಿ ಅದನ್ನು ಹುಡುಕಾಡ ತೊಡಗಿದರು. ಬಳಿಕ ಅವರು ಪೊಲೀಸರಿಗೆ ಮಗು ನಾಪತ್ತೆಯಾಗಿದೆ ಎಂದು ದೂರು ನೀಡಿದರು.

ಮಗುವಿನ ಮೃತ ದೇಹ ಇಂದು ನಸುಕಿನ ವೇಳೆ ಅಲ್ಲೇ ಸಮೀಪ ಪತ್ತೆಯಾಯಿತು. ಅದನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಅದರ ಮೇಲೆ ಅತ್ಯಾಚಾರ ನಡೆದಿರುವುದು ಮತ್ತು ಅದರ ತಲೆಯನ್ನು ಕಲ್ಲಿನಿಂದ ಜಜ್ಜಿ ಸಾಯಿಸಿರುವುದು ಸಾಬೀತಾಯಿತು.

ಪೊಲೀಸರು ಸಿಸಿಟಿವಿ ಚಿತ್ರಿಕೆಯನ್ನು ಪರಿಶೀಲಿಸಿದಾಗ ವಿಕೃತಕಾಮಿ ಬಾನ್‌ಸೋಡೆ ಮಗವನ್ನು ಹೊತ್ತು ಒಯ್ಯುತ್ತಿದ್ದುದು ಕಂಡು ಬಂತು. ಒಡನೆಯೇ ಅವರು ಆತನನ್ನು ಬಂಧಿಸಿ ಐಪಿಸಿ ಮತ್ತು ಪೋಕ್‌ಸೋ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಕೇಸು ದಾಖಲಿಸಿಕೊಂಡರು.

Comments are closed.