ರಾಷ್ಟ್ರೀಯ

8 ರಾಜ್ಯಗಳಲ್ಲಿ ಹಿಂದೂಗಳೇ ಅಲ್ಪಸಂಖ್ಯಾತ ಸ್ಥಾನಮಾನ!

Pinterest LinkedIn Tumblr


ಹೊಸದಿಲ್ಲಿ: ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಸಮಿತಿ ಗುರುವಾರ ಸಭೆ ನಡೆಸಿದ್ದು, ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಬಗ್ಗೆ ಚರ್ಚಿಸಿದೆ.

ವಾಸ್ತವಾಂಶಗಳನ್ನು ಮತ್ತು ಬೇಡಿಕೆಯನ್ನು ಉಪಸಮಿತಿ ಅಧ್ಯಯನ ಮಾಡುತ್ತಿದ್ದು, ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದರು.

ಎನ್‌ಸಿಎಂ ಉಪಾಧ್ಯಕ್ಷ ಜಾರ್ಜ್‌ ಕುರಿಯನ್‌ ನೇತೃತ್ವದಲ್ಲಿ ಮೂರು ಸದಸ್ಯರ ಉಪ ಸಮಿತಿಯನ್ನು 6 ತಿಂಗಳ ಹಿಂದೆ ರಚಿಸಲಾಗಿತ್ತು. ಮೇಘಾಲಯ, ಮಿಜೋರಾಂ, ಪಂಜಾಬ್‌, ಕಾಶ್ಮೀರ, ಮಣಿಪುರ, ನಾಗಾಲ್ಯಾಂಡ್‌, ಅರುಣಾಚಲಪ್ರದೇಶ ಮತ್ತು ಲಕ್ಷದ್ವೀಪಗಳಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರೆಂದು ಘೋಷಿಸಬೇಕು ಎಂದು ಕೋರಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು.

ಆಗ ಸುಪ್ರೀಂ ಕೋರ್ಟ್‌, ಈ ವಿಚಾರದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಆಯೋಗವನ್ನು ಸಂಪರ್ಕಿಸುವಂತೆ ಸೂಚಿಸಿತ್ತು ಎಂದು ಎನ್‌ಸಿಎಂ ಮುಖ್ಯಸ್ಥ ಸಯ್ಯದ್‌ ಘಯೂರಲ್ ಹಸನ್‌ ರಿಜ್ವಿ ತಿಳಿಸಿದರು.

2011ರ ಜನಗಣತಿ ಪ್ರಕಾರ, ಲಕ್ಷದ್ವೀಪದಲ್ಲಿ ಹಿಂದೂಗಳ ಸಂಖ್ಯೆ ಕೇವಲ ಶೇ 2.5 ಆಗಿದೆ. ಅಲ್ಲಿ ಮುಸ್ಲಿಮರ ಸಂಖ್ಯೆ ಶೇ 96.58ರಷ್ಟಿದೆ. ಈಶಾನ್ಯ ರಾಜ್ಯಗಳ ಪೈಕಿ ಹಿಂದೂಗಳ ಜನಸಂಖ್ಯೆ ಮಿಜೋರಾಂನಲ್ಲಿ ಶೇ 2.7, ನಾಗಾಲ್ಯಾಂಡ್‌ನಲ್ಲಿ ಶೇ 8.75, ಮೇಘಾಲಯದಲ್ಲಿ ಶೇ 11.53, ಮಾತ್ರವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 28.44, ಪಂಜಾಬ್‌ನಲ್ಲಿ ಶೇ 38.40 ಮಂದಿ ಹಿಂದೂಗಳಿದ್ದಾರೆ.

ಅಲ್ಪಸಂಖ್ಯಾತರಾದರೂ ಸೌಲಭ್ಯ ನಿರಾಕರಣೆ:
ಈ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೂ ಅಲ್ಪ ಸಂಖ್ಯಾತರಿಗಿರುವ ಸರಕಾರಿ ಸೌಲಭ್ಯಗಳು ದೊರಕುತ್ತಿಲ್ಲ. ಒಟ್ಟಾರೆ, ಕೇಂದ್ರ ಸರಕಾರ ವಾರ್ಷಿಕವಾಗಿ 20,000 ಅಲ್ಪ ಸಂಖ್ಯಾತರಿಗೆ ತಾಂತ್ರಿಕ ಶಿಕ್ಷಣದ ಸ್ಕಾಲರ್‌ಶಿಪ್‌ ನೀಡುತ್ತಿದೆ. ಆದರೆ ಈ 8 ರಾಜ್ಯಗಳಲ್ಲಿ ಹಿಂದೂಗಳಿಗೆ ಆ ಸೌಲಭ್ಯ ನಿರಾಕರಿಸಲಾಗುತ್ತಿದೆ.

1992ರ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಕಾಯ್ದೆ ಪ್ರಕಾರ, ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಪಾರ್ಸಿಗಳು ಮತ್ತು ಬೌದ್ಧರು ಮಾತ್ರ ಅಲ್ಪಸಂಖ್ಯಾತರೆಂದು ಪರಿಗಣಿಸಲಾಗಿದೆ. ಅಲ್ಲದೆ ಈಗ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಬೇಡಿಕೆ ದ್ವಿಗುಣಗೊಂಡಿದೆ. ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದಷ್ಟೇ ಅಲ್ಲ, ಯಾವುದೇ ರಾಜ್ಯದ ಒಟ್ಟು ಜನಸಂಖ್ಯೆಯ ಶೇ 10ನ್ನು ಮೀರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಆ ಸ್ಥಾನಮಾನ ರದ್ದುಪಡಿಸಬೇಕು ಎಂಬ ಕೂಗು ಬಲವಾಗಿದೆ.

Comments are closed.