ಫಿರೋಜಾಬಾದ್: ಮಟನ್ ಮಾಡಿಲ್ಲವೆಂಬ ಸಿಟ್ಟಿಗೆ ಪಾಪಿ ಪತಿಯೋರ್ವ ಪತ್ನಿಯನ್ನು ಮೂರನೇ ಮಹಡಿಯಿಂದ ತಳ್ಳಿ ಸಾಯಿಸಿದ ಬೆಚ್ಚಿ ಬೀಳಿಸುವ ಕೃತ್ಯ ಜಿಲ್ಲೆಯ ಪಚ್ವಾನ್ ಕಾಲೋನಿಯಲ್ಲಿ ಶುಕ್ರವಾರ ನಡೆದಿದ್ದು, ಬಹಳ ತಡವಾಗಿ ಬೆಳಕಿಗೆ ಬಂದಿದೆ.
ನರ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಮೃತಳನ್ನು 30 ವರ್ಷದ ರಾಣಿ ಎಂದು ಗುರುತಿಸಲಾಗಿದೆ. 5 ವರ್ಷದ ಹಿಂದೆ ಮನೋಜ್ ಕುಮಾರ್ ( ಆರೋಪಿ) ಜತೆ ರಾಣಿ ಮದುವೆಯಾಗಿತ್ತು.
ಗುರುವಾರ ರಾತ್ರಿ 11. 30ಕ್ಕೆ ಮನೆಗೆ ಬಂದ ಮನೋಜ್ ಮಟನ್ ಮಾಡಿ ಬಡಿಸುವಂತೆ ಪತ್ನಿಗೆ ಹೇಳಿದ್ದಾನೆ. ಆದರೆ ನಡುರಾತ್ರಿಯಲ್ಲಿ ಮಟನ್ ಮಾಡಲು ರಾಣಿ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪತಿ ಕಬ್ಬಿಣದ ಪೈಪ್‌ನಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಪ್ರಜ್ಞಾಹೀನ ಸ್ಥಿತಿಗೆ ಜಾರಿದ ರಾಣಿಯನ್ನು ಮಹಡಿಯಿಂದ ಕೆಳಕ್ಕೆ ದೂಡಿ ಅಪಘಾತ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಾನೆ.
ಶುಕ್ರವಾರ ಮುಂಜಾನೆ 3.30 ರ ಸುಮಾರಿಗೆ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡ ಗ್ರಾಮಸ್ಥರು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದರೂ ಬದುಕಿದ್ದ ರಾಣಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಆರೋಪಿ ಮನೋಜ್ ಸದಾ ಕುಡಿದು ಮನೆಗೆ ಬಂದು ಪತ್ನಿಗೆ ಹಿಂಸೆ ನೀಡುತ್ತಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ.
Comments are closed.