ರಾಷ್ಟ್ರೀಯ

ಆರೆಸ್ಸೆಸ್‌ ವಿರುದ್ಧ ಕಾಂಗ್ರೆಸ್‌ ಸೇವಾದಳ ಧ್ವಜಾರೋಹಣ ಅಭಿಯಾನ

Pinterest LinkedIn Tumblr


ಹೊಸದಿಲ್ಲಿ: ದೇಶಭಕ್ತಿ ವಿಚಾರದಲ್ಲಿ ಆರೆಸ್ಸೆಸ್‌ ಅನ್ನು ಎದುರಿಸುವ ಪ್ರಯತ್ನವಾಗಿ ಕಾಂಗ್ರೆಸ್‌ ಸೇವಾದಳ ದೇಶಾದ್ಯಂತ 1,000 ನಗರಗಳಲ್ಲಿ ಪ್ರತಿ ತಿಂಗಳೂ ಧ್ವಜಾರೋಹಣ ನಡೆಸಲು ನಿರ್ಧರಿಸಿದೆ.

ಕಾರ್ಯಕ್ರಮದ ವೇಳೆ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ ಮತ್ತು ಜಾತ್ಯತೀತತೆ ಆಧರಿಸಿದ ರಾಷ್ಟ್ರೀಯವಾದ, ಸಹಿಷ್ಣುತೆ ಮತ್ತು ಬಹುತ್ವ- ಇತ್ಯಾದಿಗಳ ಬಗ್ಗೆ ಚರ್ಚೆಗಳನ್ನು ಆರಂಭಿಸಲಿದೆ ಎಂದು ಸೇವಾದಳದ ಹಿರಿಯ ನಾಯಕರೊಬ್ಬರು ತಿಳಿಸಿದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದ ಬಳಿಕ ಮುಂದುವರಿಯುವುದಾಗಿ ಅವರು ತಿಳಿಸಿದರು.

ಸಂಘಟನೆಯ ಸಮಗ್ರ ಪುನಾರಚನೆಗೆ ನೀಲನಕ್ಷೆ ಸಿದ್ಧಪಡಿಸಿದ್ದು, ಸೋಮವಾರ ರಾಹುಲ್ ಗಾಂಧಿ ಸಮ್ಮುಖದಲ್ಲಿ ಬಹಿರಂಗಪಡಿಸಲಾಗುವುದು ಎಂದು ಅವರು ನುಡಿದರು.

‘ಕಳೆದ ಕೆಲವು ವರ್ಷಗಳಲ್ಲಿ ಸೇವಾದಳ ಹಿಂದಿನಷ್ಟು ಸಕ್ರಿಯವಾಗಿರಲಿಲ್ಲ. ಅಲ್ಲದೆ ಕಾಂಗ್ರೆಸ್‌ ಕಾರ್ಯಕ್ರಮಗಳ ನಿರ್ವಹಣೆಗೆ ಸೀಮಿತವಾಗಿತ್ತು. ಈಗ ಮತ್ತೆ ಸಂಘಟನೆಯ ಬಲವರ್ಧನೆಗೆ ನಾವು ಚಿಂತಿಸುತ್ತಿದ್ದೇವೆ’ ಎಂದು ಸೇವಾದಳದ ಮುಖ್ಯಸ್ಥ ಲಾಲ್‌ಜಿ ಭಾಯಿ ಪಿಟಿಐ ‘ಭಾಷಾ’ ಸುದ್ದಿಸಂಸ್ಥೆಗೆ ವಿವರಿಸಿದರು.

‘ಈಗ ನಾವು ರಾಷ್ಟ್ರ ನಿರ್ಮಾಣ, ದೇಶ ಸೇವೆ, ಸೇವಾದಳದ ಅಭಿವೃದ್ಧಿ ಮತ್ತು ಪಕ್ಷದ ಜತೆಗೆ ಉತ್ತಮ ಸಮನ್ವಯದೊಂದಿಗೆ ಕೆಲಸ ಮಾಡುವತ್ತ ಗಮನ ಹರಿಸುತ್ತೇವೆ’ ಎಂದು ಅವರು ತಿಳಿಸಿದರು.

ಮುಂದಿನ ಮೂರು ತಿಂಗಳುಗಳಲ್ಲಿ ದೇಶಾದ್ಯಂತ ತರಬೇತಿ ಶಿಬಿರಗಳನ್ನು ನಡೆಸಲಾಗುವುದು. ಮೊದಲ ಶಿಬಿರ ಜೂನ್‌ 11ರಂದು ಮಣಿಪುರದಲ್ಲಿ ನಡೆಯಲಿದೆ. ದೇಶದ ಪೂರ್ವ ಭಾಗದ ಸೇವಾದಳ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದೇಸಾಯಿ ವಿವರಿಸಿದರು.

ಪ್ರತಿ ತಿಂಗಳ ಕೊನೆಯ ಭಾನುವಾರದಂದು ದೇಶದ 1,000 ನಗರಗಳಲ್ಲಿ ‘ಧ್ವಜವಂದನೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮದಲ್ಲಿ ಧ್ವಜಾರೋಹಣದ ಬಳಿಕ ನೆಹರೂ-ಗಾಂಧಿ ವಿಚಾರಧಾರೆಗಳ ಬಗ್ಗೆ ಚರ್ಚೆ, ಉಪನ್ಯಾಸ ಏರ್ಪಡಿಸಲಾಗುವುದು ಎಂದವರು ತಿಳಿಸಿದರು.

ಒಟ್ಟು 700 ಜಿಲ್ಲೆಗಳು ಮತ್ತು ನಗರಗಳಲ್ಲಿ ಸೇವಾದಳ ಘಟಕಗಳಿದ್ದು, ಪ್ರತಿ ಘಟಕದಲ್ಲಿ 20ರಿಂದ 200ರ ವರೆಗೂ ಸ್ವಯಂಸೇವಕರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

Comments are closed.