ರಾಷ್ಟ್ರೀಯ

ತಮಿಳುನಾಡು ಮೂಲದ ಡೆನ್ಮಾರ್ಕ್ ನಿವಾಸಿ ತಂದೆ- ತಾಯಿ ಹುಡುಕುತ್ತ ಹೊರಟವನಿಗೆ ಅಣ್ಣ ಸಿಕ್ಕಿದ

Pinterest LinkedIn Tumblr


ಚೆನ್ನೈ: ಕಳೆದ 10 ವರ್ಷಗಳಿಂದ ಡೇವಿಡ್ ನಿಲ್ಸನ್ ಮತ್ತು ಮಾರ್ಟಿನ್ ರಸ್‌ಮುಚ್ ಹಲವು ಬಾರಿ ಎದುರಾಗಿದ್ದಾರೆ. ಕಚೇರಿಯಲ್ಲಿ, ಪಾರ್ಟಿಗಳಲ್ಲಿ ಹೀಗೆ ಅಚಾನಕ್‌ ಆಗಿ ಒಬ್ಬರನೊಬ್ಬರು ಸಂಧಿಸುತ್ತಲೇ ಇದ್ದಾರೆ. ಆದರೆ ಎಂದಿಗೂ ಕೂಡ ಪರಸ್ಪರ ಮಾತಾಡಿರಲಿಲ್ಲ. ಇತ್ತೀಚಿಗೆ ಡೇವಿಡ್ ತನಗೆ ಜನ್ಮ ನೀಡಿದ ತಂದೆ-ತಾಯಿಗಳನ್ನು ಹುಡುಕಿಕೊಂಡು ಭಾರತಕ್ಕೆ ಬಂದಾಗಲೇ ಮಾರ್ಟಿನ್ ತನ್ನ ಅಣ್ಣನೆಂಬ ಸತ್ಯ ಆತನಿಗೆ ಅರಿವಾಗಿದ್ದು.

ಡೆನ್ಮಾರ್ಕ್ ನಿವಾಸಿಗಳಾಗಿರುವ ಡೇವಿಡ್ ಮತ್ತು ಮಾರ್ಟಿನ್ ಮೂಲತಃ ತಮಿಳುನಾಡಿನವರಾಗಿದ್ದು, ಅವರ ಬಾಲ್ಯದ ಹೆಸರು ಸನತ್ ಕುಮಾರ್ (ಡೇವಿಡ್) ಮತ್ತು ರಾಜನ್ (ಮಾರ್ಟಿನ್) . 1978ರಲ್ಲಿ ಇವರಿಬ್ಬರನ್ನು ಪಲಾವರಮ್‌ನಲ್ಲಿ ಮದ್ರಾಸ್ ಕ್ರಿಶ್ಚಿಯನ್ ಚಿಲ್ಡ್ರನ್ ಹೋಮ್ ( ಅನಾಥಾಶ್ರಮ) ಸೇರಿಸಲಾಗಿತ್ತು. ಡೆನ್ಮಾರ್ಕ್‌ನ ಪ್ರತ್ಯೇಕ ದಂಪತಿ ಇವರಿಬ್ಬರನ್ನು ದತ್ತು ತೆಗೆದುಕೊಂಡಿದ್ದರು.

ಅಣ್ಣ ಸಿಕ್ಕಿದ್ದು ಹೇಗೆ?

ಹೆತ್ತವರ ಶೋಧದಲ್ಲಿ ಮುಳುಗಿದ್ದ ಡೇವಿಡ್‌ನಿಗೆ ಆತನ ಸಾಕು ತಂದೆ ತಾಯಿ ಜಾರ್ಜ್ ಎಂಬಾತನ ಫೋಟೋ ಕೊಟ್ಟು ಈತನಿಂದ ನಿನಗೆ ಸಹಾಯವಾಗಬಹುದೆಂದು ಹೇಳಿದ್ದರು. 2013ರಲ್ಲಿ ಚೈನ್ನೈಗೆ ಬಂದಿಳಿದ ಡೇವಿಡ್ ಪಲಾವರಂನಲ್ಲಿ ಅನಾಥಾಶ್ರಮ ನಡೆಸುವ ಜಾರ್ಜ್‌ನನ್ನು ಹುಡುಕಿಕೊಂಡು ಹೊರಟ. ಆದರೆ ದಶಕಗಳ ಹಿಂದೆಯೇ ಆತ ಸಾವನ್ನಪ್ಪಿರುವ ಮಾಹಿತಿ ದೊರೆಯಿತು.

ಡೆನ್ಮಾರ್ಕ್‌ಗೆ ಮರಳಿದ ಆತನಿಗೆ ಸಾಕು ತಾಯಿ, ಜಾರ್ಜ್ 1979ರಲ್ಲಿ 4 ಜನ ಮಕ್ಕಳನ್ನು ಕರೆದುಕೊಂಡು ಡೆನ್ಮಾರ್ಕ್‌ಗೆ ಬಂದಿದ್ದ ಎಂದು ಹೇಳಿದರು. ಈ ಮಾಹಿತಿಯನ್ನಾಧರಿಸಿ ಅಂತರ್ ದೇಶಿಯ ದತ್ತು ಪ್ರಕ್ರಿಯೆಯ ಕಾನೂನುಬದ್ಧ ಅಂಗೀಕಾರಕ್ಕೆ ಸಹಾಯ ಮಾಡುತ್ತಿದ್ದ ಚೆನ್ನೈ ಮೂಲದ ವಕೀಲರಾದ ಸುಸಾನ್ ಜಾರ್ಜ್ ಅವರನ್ನು ಸಂಪರ್ಕಿಸಿದ್ದಾರೆ.
ಅವರಿಂದ ಡೇವಿಡ್‌ಗೆ ಹೆತ್ತ ತಾಯಿ ಬಗ್ಗೆ ಮಾಹಿತಿ ದೊರೆತಿದೆ. 1978 ರಲ್ಲಿ ತಂಜಾವೂರಿನ ಧನಲಕ್ಷ್ಮಿ ಎಂಬಾಕೆ ತನ್ನನ್ನು ಮತ್ತು ಅಣ್ಣನನ್ನು ಅನಾಥಾಶ್ರಮಕ್ಕೆ ಒಪ್ಪಿಸಿದ್ದು, ಬಳಿಕ ತಮ್ಮಿಬ್ಬರನ್ನು ಮತಾಂತರಿಸಿದ್ದು ಆತನಿಗೆ ತಿಳಿಯಿತು.

ಚೆನ್ನೈ ಕಾರ್ಪೋರೇಶನ್‌ನಲ್ಲಿ ಜನ್ಮ ದಾಖಲೆ ಪರಿಶೀಲಿಸಿದಾಗ ತನ್ನ ಮತ್ತು ರಾಜನ್ (ಮಾರ್ಟಿನ್) ಪೋಷಕರ ಹೆಸರು, ವಿಳಾಸ ಒಂದೇ ಆಗಿರುವುದು ಆತನ ಗಮನಕ್ಕೆ ಬಂದಿದೆ. ಜತೆಗೆ ರಾಜನ್ ಸಹ ಡೆನ್ಮಾರ್ಕ‌ನಲ್ಲಿದ್ದಾನೆ ಎಂಬುದು ಗೊತ್ತಾಗಿದೆ. ಅಲ್ಲಿ ದತ್ತು ನೀಡುವ ಪ್ರಕ್ರಿಯೆಯನ್ನು ಕೈಗೊಳ್ಳುವ ಸಂಸ್ಥೆಯನ್ನು ಸಂಪರ್ಕಿಸಿದಾಗ ರಾಜನ್ ( ಮಾರ್ಟಿನ್ ) ಎಂಬಾತನನ್ನು ಡೆನ್ಮಾರ್ಕ್ ದಂಪತಿ 1979ರಲ್ಲಿ ದತ್ತು ಪಡೆದಿರುವುದು ಖಚಿತವಾಯ್ತು. ಅವರವನಿಗೆ ಆತನ ಸಂಪರ್ಕ ವಿವರಗಳನ್ನು ನೀಡಿದ್ದಾರೆ.

ಮೂರು ತಿಂಗಳ ಬಳಿಕ ಫೇಸ್‌ಬುಕ್‌ನಲ್ಲಿ ಮಾರ್ಟಿನ್ ನೀನು ಹೇಳುತ್ತಿರುವುದು ನಿಜವಾ? ನಾವಿಬ್ಬರು ಅಣ್ಣತಮ್ಮಂದಿರಾ? ಎಂದು ಸಂದೇಶ ಕಳುಹಿಸಿದ. ಸಹೋದರರಿಬ್ಬರು ಎರಡು ತಿಂಗಳ ಬಳಿಕ ಭೇಟಿಯಾಗಿದ್ದಾರೆ.

Comments are closed.